ಬೆಂಗಳೂರು : ಜಾತಿ ಗಣತಿ ವರದಿ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಗದ್ದಲ ಎಬ್ಬಿಸಿದ್ದು, ಜಾತಿ ಗಣತಿಯ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಭಾರೀ ಕೋಲಾಹಲ, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಜಾತಿ ಜನಗಣತಿ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ವಿವಾದದ ಸುಳಿಗೆ ಸಿಲುಕಿ ಪ್ರಬಲ ಸಮುದಾಯಗಳ ಆಕ್ರೋಶದ ಕಿಚ್ಚಿಗೆ ಕಾರಣವಾಗಿರುವ ಜಾತಿ ಗಣತಿ ವರದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಜಾತಿ ಗಣತಿ ಜ್ವಾಲೆ ಇವತ್ತು ಏನಾಗುತ್ತೆ ಅನ್ನೋ ಕುತೂಹಲ, ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಸದ್ದು ಮಾಡಲಿದೆ. ಲಿಂಗಾಯತ, ಒಕ್ಕಲಿಗರ ಪ್ರಬಲ ವಿರೋಧದ ನಡುವೆ ಸಿದ್ದರಾಮಯ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಜಾತಿ ಗಣತಿ ವರದಿ ಚರ್ಚೆಗಾಗಿಯೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಜೆ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ಮಾಡಲಾಗಿತ್ತಾದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಸಂಪುಟದ ಸಚಿವರಿಗೆ ವರದಿಯ ಪ್ರತಿಯನ್ನು ಅಧ್ಯಯನಕ್ಕಾಗಿ ನೀಡಿದ್ದರು. ಹೀಗಾಗಿ ಇಂದು ನಡೆಯುವ ವಿಶೇಷ ಸಂಪುಟ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಸದ್ಯ ಬಹಿರಂಗಗೊಳ್ಳುತ್ತಿರುವ ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ ಸ್ವಪಕ್ಷದಲ್ಲೂ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತವಾಗಿದೆ. ವಿರೋಧವನ್ನೂ ಲೆಕ್ಕಿಸದೆ ಸಿಎಂ ಸಿದ್ದರಾಮಯ್ಯ ಇಂದು ಏನ್ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ಕ್ಯಾಬಿನೆಟ್ ಕ್ಲೈಮ್ಯಾಕ್ಸ್
- ಸಭೆಯ ಆರಂಭದಲ್ಲಿ ಎಲ್ಲಾ ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಸಂಗ್ರಹಿಸುವ ಸಿಎಂ
- ಮೊದಲ ಹಂತದಲ್ಲಿ ಸಚಿವರಿಂದ ವೈಯಕ್ತಿಕ ಅಭಿಪ್ರಾಯ
- ಒಬ್ಬೊಬ್ಬ ಸಚಿವರಿಗೂ ಸಮಯಾವಕಾಶ ನೀಡುವ ಸಿಎಂ
- ನಂತರ ಸಮುದಾಯವಾರು ಸಚಿವರ ಅಭಿಪ್ರಾಯ ಸಂಗ್ರಹ
- ಯಾವ್ಯಾವ ಸಮುದಾಯದಲ್ಲಿ ಏನೇನು ಅಭಿಪ್ರಾಯ ಇದೆ
- ಏನು ಮಾಡಬಹುದು ಎಂಬ ಸಲಹೆ ಮುಂದಿಡುವ ಸಿಎಂ
ಸಿಎಂ ಮುಂದಿರುವ ಆಯ್ಕೆಗಳೇನು?
- ಜಾತಿಗಣತಿ ವರದಿ ಬಿಡುಗಡೆ ಮಾಡುವುದು
- ಜಾತಿಗಣತಿ ವರದಿ ಬಿಡುಗಡೆ ಮಾಡದಿರುವುದು
- ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸುವುದು
- ಸಚಿವ ಸಂಪುಟ ಉಪಸಮಿತಿ ರಚನೆ ಮಾಡುವುದು
- ವಿಶೇಷ ಅಧಿವೇಶನ ಕರೆಯುವುದು
ಇದನ್ನೂ ಓದಿ : ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ – ರಾಷ್ಟ್ರಪತಿಗಳ ಅಂಗಳಕ್ಕೆ ಮಸೂದೆ ಕಳುಹಿಸಿದ ಗವರ್ನರ್ ಗೆಹ್ಲೋಟ್!
