ಬೆಂಗಳೂರು : ನಮ್ಮ ಮೆಟ್ರೋ ಕಾಮಗಾರಿ ವೇಳೆ ನಿರ್ಲಕ್ಷ್ಯ ತೋರಿದ ಪರಿಣಾಮ ಮತ್ತೊಂದು ದುರಂತ ಸಂಭವಿಸಿದೆ. ಮೆಟ್ರೋ ಕಾಮಗಾರಿಗೆ ಕೊಂಡೊಯ್ಯುತ್ತಿದ್ದ ವಯಾಡೆಕ್ಟ್ ಉರುಳಿ ಬಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದೆ.

ಖಾಸಿಂ ಸಾಬ್ ಮೃತ ಆಟೋ ಚಾಲಕ. ಈತ ಮೂಲತಃ ಹೆಗಡೆನಗರದ ನಿವಾಸಿ. ಪ್ಯಾಸೆಂಜರ್ ಪಿಕ್ ಮಾಡಿಕೊಂಡು ನಾಗವಾರದ ಕಡೆಗೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ತಡರಾತ್ರಿ 12:05 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಆದ್ರೆ ಆಟೋದಲ್ಲಿದ್ದ ಪ್ಯಾಸೆಂಜರ್ ಕೊಂಚದರಲ್ಲೇ ಎಸ್ಕೇಪ್ ಆಗಿದ್ದಾರೆ.

ದುರಂತ ಸಂಭವಿಸಿದ್ದು ಹೇಗೆ? ಮೆಟ್ರೋ ತಡೆಗೋಡೆ ನಿರ್ಮಾಣಕ್ಕಾಗಿ ಬೃಹತ್ ಗಾತ್ರದ ವಯಾಡೆಕ್ಟ್ (ಸಿಮೆಂಟ್ ಗೋಡೆ) ಕೊಂಡೊಯ್ಯಲಾಗುತ್ತಿತ್ತು. ಏರ್ಪೋಟ್ ಮಾರ್ಗದ ಮೆಟ್ರೋ ಕಾಮಗಾರಿಗಾಗಿ 18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡೆಕ್ಟ್ ತೆಗೆದುಕೊಂಡು ಹೋಗಲಾಗುತ್ತಿತ್ತು. ಕೋಗಿಲು ಕ್ರಾಸ್‌ನಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೇ ಎರಡು ತುಂಡಾಗಿದೆ. ಪರಿಣಾಮ ವಯಾಡೆಕ್ಟ್ ನೆಲಕ್ಕುರುಳಿದೆ.

ಇದೇ ಸಂದರ್ಭದಲ್ಲಿ ಲಾರಿ ಪಕ್ಕದಲ್ಲೇ ಇದ್ದ ಆಟೋ ಮೇಲೆ ವಯಾಡೆಕ್ಟ್ ಬಿದ್ದಿದೆ. ಲಾರಿ ತುಂಡಾಗಿ ವಯಾಡೆಕ್ಟ್ ಬೀಳುತ್ತಿದ್ದಂತೆ ಆಟೋದಲ್ಲಿದ್ದ ಪ್ಯಾಸೆಂಜರ್ ತಕ್ಷಣಕ್ಕೆ ಇಳಿದು ಓಡಿ ಹೋಗಿದ್ದಾರೆ. ಆದ್ರೆ, ಚಾಲಕ ಇಳಿಯುವಷ್ಟರಲ್ಲಿ ಆಟೋ ಮೇಲೆ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಸಹ ಸಂಪೂರ್ಣ ಅಪ್ಪಚ್ಚಿಯಾಗಿದೆ. ಘಟನೆಯ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ನಮ್ಮ ಮೆಟ್ರೋ ವಿರುದ್ದ ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದು, ರಸ್ತೆ ಬ್ಲಾಕ್ ಮಾಡದೇ, ಸೆಕ್ಯುರಿಟಿ ವಾಹನ ಇಲ್ಲದೆ ಬಂದ ಕಾರಣ ಅನಾಹುತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2023ರ ಜನವರಿಯಲ್ಲಿ ಇದೇ ರೀತಿ ನಾಗವಾರ ಮುಖ್ಯ ರಸ್ತೆಯಲ್ಲಿ ಹೋಗುವಾಗ ಏಕಾಏಕಿ ಬೃಹತ್ ಗಾತ್ರದ ಡೆಕ್ಟ್ ಕುಸಿದು ಬೈಕ್ ಸವಾರ ಸಾವಪ್ಪಿದ ಘಟನೆ ನಡೆದಿತ್ತು.
ಇದನ್ನೂ ಓದಿ : ಗೃಹಲಕ್ಷ್ಮಿ ಹಣದಿಂದ ಬೋರ್ ಕೊರೆಸಿ ಗಂಗೆಯ ಭಾಗ್ಯ ಪಡೆದ ರೈತ ದಂಪತಿ – ಸಿಎಂ ಸಿದ್ದರಾಮಯ್ಯಗೆ ಧನ್ಯವಾದ!







