ಬೆಂಗಳೂರು : ಜಾತಿ ಜೇನುಗೂಡಿಗೆ ಕೈ ಹಾಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಜಾತಿ ಗಣತಿ ವರದಿ ಬಿಸಿತುಪ್ಪವಾಗಿ ಪರಿಣಮಿಸಿದೆ. ಸರ್ಕಾರಕ್ಕೆ ಸಲ್ಲಿಸಿರುವ ವರದಿ ಬಹಿರಂಗವಾಗುತ್ತಿದ್ದಂತೆ ಎಲ್ಲೆಲ್ಲೂ ಕೋಲಾಹಲ ಎದ್ದಿದೆ. ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಈಗ ಸಿಎಂ ಸಿದ್ದರಾಮಯ್ಯ ಗುರಿಯಾಗಿದ್ದಾರೆ. ಅದರಲ್ಲೂ ರಾಜ್ಯದ ಪ್ರಬಲ ಒಕ್ಕಲಿಗ-ಲಿಂಗಾಯತ ಸಮುದಾಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಒಕ್ಕಲಿಗರು ನಿನ್ನೆ ಜಾತಿಗಣತಿ ವಿರುದ್ಧ ದಂಗೆ ಏಳುವ ಸೂಚನೆಯನ್ನೂ ಕೊಟ್ಟಿದ್ದಾರೆ.
ಈ ಬೆನ್ನಲ್ಲೇ ಎಚ್ಚೆತ್ತ ಹಿಂದುಳಿದ ಸಮುದಾಯದ ನಾಯಕರು, ಇಂದು ಜಾತಿಗಣತಿ ವದರಿಯನ್ನು ಬೆಂಬಲಿಸಿ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ. ಮಧ್ಯಾಹ್ನ 01.00 ಗಂಟೆಗೆ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ ಅವರ ನೇತ್ರತ್ವದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಂ , ಮಾಜಿ ಸಭಾಪತಿಗಳಾದ ವಿ.ಆರ್. ಸುದರ್ಶನ್, ಮಾಜಿ ವಿರೋಧ ಪಕ್ಷದ ನಾಯಕರು ಮತ್ತು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ.ಆರ್. ರಮೇಶ್ ಸೇರಿದಂತೆ ಮಾಜಿ ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮಿ ಹಣದಿಂದ ಬೋರ್ ಕೊರೆಸಿ ಗಂಗೆಯ ಭಾಗ್ಯ ಪಡೆದ ರೈತ ದಂಪತಿ – ಸಿಎಂ ಸಿದ್ದರಾಮಯ್ಯಗೆ ಧನ್ಯವಾದ!
