ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ನಡೆದಿದೆ. ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ‘ಕಾನ್ಫಿಡೆಂಟ್ ಗ್ರೂಪ್ಸ್’ (Confident Group) ಚೇರ್ಮನ್ ಸಿ.ಜೆ. ರಾಯ್ (C.J. Roy) ಅವರು ಇಂದು ಸಂಜೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳ ದಾಳಿ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಬೆಂಗಳೂರಿನ ಆನೇಪಾಳ್ಯದ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ಸ್ ಕಚೇರಿಯಲ್ಲಿ ಸಿ.ಜೆ. ರಾಯ್ ಅವರು ತಮ್ಮ ಪಿಸ್ತೂಲ್ನಿಂದ ತಲೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಘಟನೆಯ ಸಮಯದಲ್ಲಿ ಐಟಿ ಅಧಿಕಾರಿಗಳು ಕಚೇರಿಯಲ್ಲೇ ಇದ್ದು, ವಿಚಾರಣೆ ನಡೆಸುತ್ತಿದ್ದರು ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಕಾನ್ಫಿಡೆಂಟ್ ಗ್ರೂಪ್ಸ್ ಮೇಲೆ ಐಟಿ ಅಧಿಕಾರಿಗಳು ಸತತ ನಿಗಾ ಇಟ್ಟಿದ್ದರು. ಇಂದು ಸಹ ಅಧಿಕಾರಿಗಳು ಕಚೇರಿಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಯ್ ಅವರು, ಅಧಿಕಾರಿಗಳ ಎದುರೇ ಅಥವಾ ಪಕ್ಕದ ಕೊಠಡಿಗೆ ತೆರಳಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ನಡೆದ ತಕ್ಷಣ ಅಶೋಕನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸುವ ಪ್ರಕ್ರಿಯೆ ನಡೆಯುತ್ತಿದೆ. ಉದ್ಯಮ ರಂಗದಲ್ಲಿ ದೈತ್ಯ ಹೆಸರು ಮಾಡಿದ್ದ ಸಿ.ಜೆ. ರಾಯ್ ಅವರ ಈ ಹಠಾತ್ ನಿರ್ಧಾರ ರಿಯಲ್ ಎಸ್ಟೇಟ್ ವಲಯದಲ್ಲಿ ಭಾರೀ ಆಘಾತ ಮೂಡಿಸಿದೆ.
ಇದನ್ನೂ ಓದಿ : ಚಿತ್ರೋತ್ಸವದಲ್ಲಿ ಜ.31ರಂದು ಮಾಲ್ ನಲ್ಲಿ ವೀಕ್ಷಿಸಬಹುದಾದ ವಿಶ್ವದ ಶ್ರೇಷ್ಠ 10 ಸಿನಿಮಾಗಳು!







