ಜಾತಿ ಜನಗಣತಿಗೆ ಲಿಂಗಾಯತರ ಬಳಿಕ ಒಕ್ಕಲಿಗರಿಂದಲೂ ವಿರೋಧ – ಇಂದು ಡಿಕೆಶಿ ನೇತೃತ್ವದಲ್ಲಿ ಒಕ್ಕಲಿಗ ಶಾಸಕರ ಮೀಟಿಂಗ್!

ಬೆಂಗಳೂರು : ಸದ್ಯ ಕರ್ನಾಟಕದಲ್ಲಿ ಜಾತಿಗಣತಿ ವರದಿ ಜಟಾಪಟಿ ಭುಗಿಲೆದ್ದಿದೆ. ಜಾತಿಗಣತಿ ಅನ್ನೋ ಜೇನುಗೂಡಿಗೆ ಕಲ್ಲೊಡೆದಿರುವ ಸರ್ಕಾರ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ್ದು, ಪರ ವಿರೋಧ ಚರ್ಚೆ ಜೋರಾಗುತ್ತಿದೆ. ಹೀಗಿರುವಾಗಲೇ ಜಾತಿ ಗಣತಿ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು​ ತಮ್ಮ ನಿವಾಸದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರ ಮಹತ್ವದ ಸಭೆ ಕರೆದಿದ್ದಾರೆ.

ಬೆಂಗಳೂರಿನ ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಡಿಸಿಎಂ ಅವರ ಸರ್ಕಾರಿ ನಿವಾಸದಲ್ಲಿ ಇಂದು ಸಂಜೆ 6.00 ಗಂಟೆಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಒಕ್ಕಲಿಗ ಶಾಸಕರ ಅಭಿಪ್ರಾಯವನ್ನ ಡಿ.ಕೆ ಶಿವಕುಮಾರ್ ಆಲಿಸಲಿದ್ದಾರೆ. ಜಾತಿಗಣತಿ ವರದಿಯಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗಿದೆ ಅಂತ ಬಹಿರಂಗ ಅಸಮಾಧಾನ ಕೇಳಿ ಬರ್ತಿರೋ ಕಾರಣ ವರದಿ ಬಗ್ಗೆ ಸಾಧಕ, ಬಾಧಕಗಳ ಚರ್ಚೆ ನಡೆಸಲಿದ್ದಾರೆ. ಏಪ್ರಿಲ್​​ 17ರಂದು ವಿಶೇಷ ಸಂಪುಟ ಸಭೆ ನಡೆಯಲಿದ್ದು, ಇದಕ್ಕೂ ಮೊದಲೇ ಡಿಕೆಶಿ ಕರೆದ ಈ ಸಭೆ ಕುತೂಹಲಕ್ಕೆ ಕಾರಣವಾಗಿದೆ.

ಯಾರಿಗೂ ಅನ್ಯಾಯವಾಗೋದಕ್ಕೆ ಬಿಡಲ್ಲ. ಎಲ್ಲರ ಗೌರವ ಕಾಪಾಡ್ತೇವೆ ಅಂತಿರೋ ಡಿಸಿಎಂ ಡಿ.ಕೆ ಶಿವಕುಮಾರ್​ರ ಇವತ್ತಿನ ನಡೆ ಮೇಲೆ ಕುತೂಹಲ ನೆಟ್ಟಿದೆ. ಜಾತಿಗಣತಿಗೆ ಲಿಂಗಾಯತ, ಒಕ್ಕಲಿಗ ಸೇರಿದಂತೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿರೋದು ಗೊತ್ತೇ ಇದೆ. ಈ ನಡುವೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಲ್ಲೊಬ್ಬರಾದ ಡಿಕೆಶಿ, ಪಕ್ಷದ ಸಮುದಾಯದ ಶಾಸಕರನ್ನ ಒಂದೆಡೆ ಸೇರಿಸ್ತಿರೋದು ನಾನಾ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ : ಕಟ್ಟಡ ನಿರ್ಮಾಣ ಕಾಮಗಾರಿಗೆ ಒಸಿ ಕಡ್ಡಾಯ – ಬೆಸ್ಕಾಂ ಹೊಸ ರೂಲ್ಸ್​​ಗೆ ಜನರ ಪರದಾಟ.. ಸರ್ಕಾರಕ್ಕೆ ಹಿಡಿ ಶಾಪ!

Btv Kannada
Author: Btv Kannada

Read More