ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸ್ವಾಧೀನಾನುಭವ ಪತ್ರ (ಒಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರ (ಸಿಸಿ) ಹೊಂದಿರದ ವಾಣಿಜ್ಯ, ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ಬೆಸ್ಕಾಂನಲ್ಲಿ ಹೊಸ ವಿದ್ಯುತ್ ಸಂಪರ್ಕ ನೀಡುವ ಚಟುವಟಿಕೆ ಬಹುತೇಕ ಸ್ತಬ್ಧಗೊಂಡಂತಾಗಿದೆ. ಸದ್ಯ ಬೆಸ್ಕಾಂ ಹೊಸ ರೂಲ್ಸ್ಗೆ ಜನರು ಪರದಾಡುವಂತಾಗಿದ್ದು, ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಏ.4ರಂದು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಾರಣ ನೀಡಿ ಏಕಾಏಕಿ ಒಸಿ ಹಾಗೂ ಸಿಸಿ ಕಡ್ಡಾಯಗೊಳಿಸಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶೇ.80ರಷ್ಟು ಆಸ್ತಿಗಳು ಕಂದಾಯ ಹಾಗೂ ಬಿ ಖಾತಾ ನಿವೇಶನಗಳು. ಅವುಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ನೀಡುವಂತಿಲ್ಲ. ನಕ್ಷೆ ಮಂಜೂರಾತಿ ಇಲ್ಲದ ಕಟ್ಟಡಗಳಿಗೆ ಒಸಿ ಹಾಗೂ ಸಿಸಿ ನೀಡಲು ಅವಕಾಶವಿಲ್ಲ. ಇದರಿಂದ ಸಾಲ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿ ಮನೆಗಳನ್ನು ಕಟ್ಟಿಕೊಂಡಿರುವ ಸಾರ್ವಜನಿಕರು ವಿದ್ಯುತ್ ಇಲ್ಲದೆ ಅತಂತ್ರರಾಗಿದ್ದಾರೆ.
ಸುಪ್ರೀಂ ನಿಯಮ ಎಲ್ಲಾ ರಾಜ್ಯಗಳಿಗೂ ಅನ್ವಯವಾದರೆ ನಮ್ಮಲ್ಲಿ ಮಾತ್ರ ತರಾತುರಿಯಲ್ಲಿ ಸಾರ್ವಜನಿಕರಿಗೆ ಜಾಗೃತಿಯೂ ಮೂಡಿಸದೆ ಕಾಲಮಿತಿ ನಿಗದಿ ಮಾಡದೆ ತಕ್ಷಣದಿಂದ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಇದರಿಂದ ನಗರ ಭಾಗದವರೇ ಅಲ್ಲ ಗ್ರಾಮೀಣ ಭಾಗದಲ್ಲಿ ಯಾವ ಮನೆಯವರೂ ವಿದ್ಯುತ್ ಸಂಪರ್ಕ ಪಡೆಯಲಾಗು ವುದಿಲ್ಲ. ತೋಟಗಳಲ್ಲಿ ನಿರ್ಮಾಣವಾ ಗುವ ಮನೆಗಳಿಗಂತೂ ಸಾಧ್ಯವೇ ಇಲ್ಲ. ಹೀಗಾಗಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಲಕ್ಷಾಂತರ ಮನೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಿವೇಶನಗಳನ್ನು ಹೊಂದಿರುವವರೂ ಮನೆ ಕಟ್ಟಡಲಾಗದೆ ಅತಂತ್ರರಾಗಿದ್ದಾರೆ.
ಶುಲ್ಕ ಪಾವತಿಸಿದರೂ ವಿದ್ಯುತ್ ಇಲ್ಲ : ಈಗಾಗಲೇ ಅರ್ಜಿ ಶುಲ್ಕ ಪಾವತಿಸಿ, ಫೀಡರ್ ಕ್ಷೇತ್ರ ಪರಿವೀಕ್ಷಣೆ ವರದಿ, ಅಂದಾಜು ಪಟ್ಟಿ ಸಲ್ಲಿಕೆ ಹಾಗೂ ಮಂಜೂರಾತಿ ಪಡೆದಿರುವ ಹೀಗೆ ವಿವಿಧ ಹಂತದಲ್ಲಿರುವ ಅರ್ಜಿಗಳನ್ನಾದರೂ ಪರಿಗಣಿಸಿ ವಿದ್ಯುತ್ ಸಂಪರ್ಕ ನೀಡಬೇಕಾಗಿತ್ತು. ಇನ್ನು ಬಹುಮಹಡಿ ಕಟ್ಟಡಗಳಿಗೆ ಮಂಜೂರಾತಿ ಪಡೆದ 90 ದಿನಗಳವರೆಗೆ ಶುಲ್ಕ ಭರಿಸಲು ಅವಕಾಶ ಇರುತ್ತದೆ. ಇದೀಗ ಈ ಆದೇಶದಿಂದ ಮಂಜೂರಾತಿ ಪಡೆದಿದ್ದರೂ ಅವರು ಶುಲ್ಕ ಪಾವತಿಸಿ ಸಂಪರ್ಕ ಪಡೆಯುವಂತಿಲ್ಲ.
ಇನ್ನು ಬಹುಮಹಡಿ ಕಟ್ಟಡಗಳಿಗೆ ಲಕ್ಷಾಂತರ ರೂ. ಶುಲ್ಕ ಇರುತ್ತದೆ. ಈಗಾಗಲೇ ಲಕ್ಷಾಂತರ ಶುಲ್ಕ ಪಾವತಿಸುವವರಿಗೂ ಆದೇಶ ತೋರಿಸಿ ವಿದ್ಯುತ್ ಚಾರ್ಜ್ ನೀಡುತ್ತಿಲ್ಲ. ನೂರಾರು ಕೋಟಿ ರೂ. ಶುಲ್ಕ ಸಂಗ್ರಹಿಸಿಯೂ ಸಂಪರ್ಕ ನೀಡದಿರುವುದು ಯಾಕೆ? ನಮ್ಮ ಸಂಪರ್ಕಗಳನ್ನು ನೀಡಿದ ಬಳಿಕವಾದರೂ ನಿಯಮ ಜಾರಿ ಮಾಡಬಹುದಿತ್ತಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೆಟ್ಟು : ನಿಯಮದಿಂದ ಹೊಸ ಕಟ್ಟಡಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಜತೆಗೆ ನಿರ್ಮಾಣದ ಹಂತದ ಕಟ್ಟಡಗಳ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಕೇವಲ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮಾತ್ರವಲ್ಲದೆ ಸೂರು ನಿರ್ಮಿಸಿಕೊಳ್ಳಲು ಹೊರಟಿದ್ದ ಜನಸಾಮಾನ್ಯರಿಗೂ ಸಮಸ್ಯೆಯಾಗಿದೆ. ಜತೆಗೆ ಕಟ್ಟಡ ಕೂಲಿ ಕಾರ್ಮಿಕರೂ ಅತಂತ್ರರಾಗುವ ಸ್ಥಿತಿ ತಲುಪಿದೆ.
ಗುತ್ತಿಗೆದಾರರೂ ಅತಂತ್ರ : ಕಟ್ಟಡ ಮಾಲೀಕರಿಂದ ವಿದ್ಯುತ್ ಸಂಪರ್ಕ ಕಾಮಗಾರಿ ಗುತ್ತಿಗೆಗೆ ಪಡೆದಿರುವ ಗುತ್ತಿಗೆದಾರರು ಎಲ್ಲಾ ಕೆಲಸ ಮಾಡಿದ್ದರೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂಬ ಕಾರಕ್ಕೆ ಕಟ್ಟಡ ಮಾಲೀಕರು ಗುತ್ತಿಗೆದಾರರಿಗೆ ಹಣ ನೀಡುತ್ತಿಲ್ಲ. ಓಸಿ, ಸಿಸಿ ನಿಯಮ ಬರುವ ಬಗ್ಗೆ ಮುನ್ಸೂಚನೆ ಇಲ್ಲದೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಈಗ ಅತಂತ್ರರಾಗಿದ್ದಾರೆ.
ಇದನ್ನೂ ಓದಿ : ಬೆಸ್ಕಾಂ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಒಸಿ ಕಡ್ಡಾಯ – ಹೊಸ ವಿದ್ಯುತ್ ಸಂಪರ್ಕ ನೀಡುವ ಚಟುವಟಿಕೆ ಸ್ಥಬ್ಧ!
