ರಾಜ್ಯಾದ್ಯಂತ ‘ಲ್ಯಾಂಡ್‌ಲಾರ್ಡ್’ ಅಬ್ಬರ – ಅಸಮಾನತೆ, ಅನ್ಯಾಯದ ಇತಿಹಾಸ ಕೆದಕಿದ ಸಿನಿಮಾ!

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಲ್ಯಾಂಡ್‌ಲಾರ್ಡ್’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದ ‘ಕಾಟೇರ’ ಸಿನಿಮಾದ ಕಥೆ, ಚಿತ್ರಕಥೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಜೊತೆ ಜಡೇಶ್ ಕೈ ಜೋಡಿಸಿದ್ದರು. ಈಗ ಜಡೇಶ್ ಅವರ ನಿರ್ದೇಶನದಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ ಮೂಡಿಬಂದಿದೆ.

ಈ ಚಿತ್ರವು 80ರ ದಶಕದ ಗ್ರಾಮೀಣ ಭಾಗದ ಶೋಷಣೆ ಮತ್ತು ಅಸಮಾನತೆಯ ವಿರುದ್ಧದ ಹೋರಾಟ. ಚಿತ್ರದ ಕಥೆ ಸಾಗುವುದು ಕೋಲಾರ ಭಾಗದ ‘ಹುಲಿದುರ್ಗ’ ಎಂಬ ಹಳ್ಳಿಯಲ್ಲಿ. ಊರಿನ ಜಮೀನ್ದಾರ ಚಿಕ್ಕೆಜಮಾನ್ರು (ರಾಜ್ ಬಿ. ಶೆಟ್ಟಿ) ತನ್ನ ದರ್ಪದಿಂದ ಇಡೀ ಊರನ್ನೇ ತನ್ನ ಕಾಲಡಿ ಇಟ್ಟುಕೊಂಡಿರುತ್ತಾನೆ. ಕೂಲಿಗಳು ಕೂಲಿಗಳಾಗಿಯೇ ಇರಬೇಕು, ಯಾರೂ ಸ್ವಂತ ಜಮೀನು ಹೊಂದಬಾರದು ಎಂಬುದು ಅವನ ಹಠ. ಇಂತಹ ಸಂದರ್ಭದಲ್ಲಿ ರಾಮದುರ್ಗದಿಂದ ಬಂದ ರಾಚಯ್ಯ (ದುನಿಯಾ ವಿಜಯ್) ಅನ್ಯಾಯದ ವಿರುದ್ಧ ಸಿಡಿದೇಳುತ್ತಾನೆ. ರಾಚಯ್ಯನ ಮಗಳು ಭಾಗ್ಯ (ರಿತನ್ಯಾ) ಪೊಲೀಸ್ ಕಾನ್ಸ್‌ಟೇಬಲ್ ಆಗಿ ಅದೇ ಊರಿಗೆ ಬಂದಾಗ, ತಂದೆ-ಮಗಳು ಸೇರಿ ಸಂವಿಧಾನದ ಬಲದೊಂದಿಗೆ ಜಮೀನ್ದಾರನ ರಾಜಪ್ರಭುತ್ವಕ್ಕೆ ಹೇಗೆ ಅಂತ್ಯ ಹಾಡುತ್ತಾರೆ ಎಂಬುದೇ ಈ ಚಿತ್ರದ ರೋಚಕ ಕಥೆ.

ರಾಚಯ್ಯನ ಪಾತ್ರದಲ್ಲಿ ವಿಜಯ್ ಅಬ್ಬರಿಸಿದ್ದಾರೆ. ಶಾಂತವಾಗಿರುವ ಜ್ವಾಲಾಮುಖಿಯಂತಹ ಪಾತ್ರದಲ್ಲಿ ಅವರ ನಟನೆ ಮತ್ತು ಆ್ಯಕ್ಷನ್ ದೃಶ್ಯಗಳು ಅಭಿಮಾನಿಗಳಿಗೆ ಹಬ್ಬವನ್ನೇ ಉಣಬಡಿಸಿವೆ.

ಮೊದಲ ಬಾರಿಗೆ ಪೂರ್ಣ ಪ್ರಮಾಣದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ. ಶೆಟ್ಟಿ, ತಮ್ಮ ಕ್ರೂರ ನೋಟ ಮತ್ತು ಮಾತುಗಳಿಂದ ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸುತ್ತಾರೆ. ಇವರಿಬ್ಬರ ನಡುವಿನ ಮುಖಾಮುಖಿ ಚಿತ್ರದ ಹೈಲೈಟ್. ನಿಂಗವ್ವನ ಪಾತ್ರದಲ್ಲಿ ರಚಿತಾ ರಾಮ್ ಪ್ರಬುದ್ಧ ಅಭಿನಯ ನೀಡಿದ್ದಾರೆ. ವಿಜಯ್ ಜೊತೆಗಿನ ಇವರ ಕಾಂಬಿನೇಷನ್ ಸಖತ್ ಆಗಿ ಮೂಡಿಬಂದಿದೆ. ಚೊಚ್ಚಲ ಚಿತ್ರದಲ್ಲೇ ರಿತನ್ಯಾ ವಿಜಯ್ ಗಮನ ಸೆಳೆದರೆ, ಶಿಶಿರ್ ಬೈಕಾಡಿ ಮತ್ತು ಉಮಾಶ್ರೀ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶಕ ಜಡೇಶ್ ಹಂಪಿ ಅವರು 80ರ ದಶಕದ ವಾತಾವರಣವನ್ನು ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ, ಸ್ವಾಮಿ ಜೆ. ಗೌಡ ಛಾಯಾಗ್ರಹಣ, ಮಾಸ್ತಿ ಅವರ ಸಂಭಾಷಣೆಗಳು ಚಿತ್ರಕ್ಕಿದೆ.

‘ಲ್ಯಾಂಡ್‌ಲಾರ್ಡ್’ ಸಿನಿಮಾ ಭೂಮಿ ಮತ್ತು ಅಸ್ತಿತ್ವಕ್ಕಾಗಿ ನಡೆಯುವ ಹೋರಾಟದ ದನಿಯನ್ನು ಒಳಗೊಂಡಿದೆ. ಸಮಾಜದ ಅಸಮಾನತೆಯ ವಿರುದ್ಧ ಕ್ರಾಂತಿಯ ಕಿಡಿ ಹೊತ್ತಿಸುವ ಈ ಚಿತ್ರವು ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ.

ಇದನ್ನೂ ಓದಿ : ಇಂದಿನಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕಿಚ್ಚ ಸುದೀಪ್‌ ನಟನೆಯ ಮಾರ್ಕ್‌ ಸ್ಟ್ರೀಮಿಂಗ್‌!

Btv Kannada
Author: Btv Kannada

Read More