ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ವಿನ್ನರ್ ಪಟ್ಟ ಅಲಂಕರಿಸಿರುವ ಗಿಲ್ಲಿ ನಟ ಇಂದು ಕನ್ನಡಿಗರ ಮನೆಮಾತು. ದೊಡ್ಮನೆಯಲ್ಲಿ ತಮ್ಮ ಅದ್ಭುತ ಆಟ ಮತ್ತು ಹಾಸ್ಯಪ್ರಜ್ಞೆಯಿಂದ ಜನರ ಮನಗೆದ್ದ ಈ ನಟನಿಗೆ ವೃತ್ತಿಜೀವನದಲ್ಲಿ ಅತಿ ದೊಡ್ಡ ಗೆಲುವು ಸಿಕ್ಕಿರಬಹುದು. ಆದರೆ ವೈಯಕ್ತಿಕ ಜೀವನದ ಪ್ರೀತಿ-ಪ್ರೇಮದ ವಿಚಾರಕ್ಕೆ ಬಂದರೆ ಮಾತ್ರ ಈ ‘ಗಿಲ್ಲಿ’ಗೆ ಸೋಲನ್ನೇ ಕಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗಿಲ್ಲಿ ನಟನ ಪ್ರೀತಿಯ ಕಥೆ ಅತಿ ದೊಡ್ಡ ಟ್ರ್ಯಾಜೆಡಿ ಎಂದರೆ ತಪ್ಪಾಗಲಾರದು. ತಾವು ಭಾಗವಹಿಸಿದ ಪ್ರತಿ ಶೋದಲ್ಲೂ ಗಿಲ್ಲಿ ನಟ ಒಬ್ಬ ಹುಡುಗಿಯನ್ನು ಇಷ್ಟಪಡುತ್ತಿದ್ದರು. ಆದರೆ, ಅವರ ಹಾಸ್ಯದ ವ್ಯಕ್ತಿತ್ವವೇ ಅವರಿಗೆ ಮುಳುವಾಗಿದೆಯೇ? ಎಂಬ ಸಂಶಯ ಕಾಡುತ್ತಿದೆ. ಪ್ರೀತಿಯನ್ನು ಎಷ್ಟು ಗಂಭೀರವಾಗಿ ಹೇಳಿಕೊಂಡರೂ, ಹುಡುಗಿಯರು ಅದನ್ನು ಜೋಕ್ ಎಂದೇ ಭಾವಿಸುತ್ತಿದ್ದರು.
ಬಿಗ್ ಬಾಸ್ ಮನೆಯೊಳಗೆ ಕಾವ್ಯ ಶೈವ ಮತ್ತು ಗಿಲ್ಲಿ ನಟನ ಕೆಮಿಸ್ಟ್ರಿ ಸಖತ್ ಸೌಂಡ್ ಮಾಡಿತ್ತು. ಕಾವು ಕಾವು ಎನ್ನುತ್ತಾ ಗಿಲ್ಲಿ ಕಾವ್ಯರನ್ನೇ ಹಿಂಬಾಲಿಸುತ್ತಿದ್ದರು. ಆದರೆ ಕಾವ್ಯ ಮಾತ್ರ, ನಾವಿಬ್ಬರೂ ಕೇವಲ ಬೆಸ್ಟ್ ಫ್ರೆಂಡ್ಸ್ ಅಷ್ಟೇ. ಜಾಸ್ತಿ ಕಾಡಿದರೆ ಆಚೆ ಹೋದ ಮೇಲೆ ನಿನ್ನ ನಂಬರ್ ಬ್ಲಾಕ್ ಮಾಡುತ್ತೇನೆ ಎಂದು ನೇರವಾಗಿಯೇ ಹೇಳಿದ್ದರು.

ಕೇವಲ ಬಿಗ್ ಬಾಸ್ ಮಾತ್ರವಲ್ಲ, ಈ ಹಿಂದೆ ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್ ಶೋದಲ್ಲೂ ನಟಿ ಯಶಸ್ವಿನಿ ಅವರಿಗೆ ಗಿಲ್ಲಿ ಮನಸ್ಸು ಕೊಟ್ಟಿದ್ದರು. ನೀನು ಕಾರ್‌ನಲ್ಲಿ ಓಡಾಡುವವಳು, ನಾನು ಕಾಲಿನಲ್ಲಿ ನಡೆಯುವವನು. ಆದರೂ ಮನಸ್ಸು ನಿನ್ನ ಕೇಳುತ್ತಿದೆ ಎಂದು ಭಾವುಕರಾಗಿ ಹೇಳಿದ್ದರೂ ಯಶಸ್ವಿನಿ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲೂ ಗಗನ ಅವರ ಜೊತೆ ಗಿಲ್ಲಿ ನಟ ಲವ್ಲಿ ಕಾಮಿಡಿ ಮಾಡಲು ಹೋಗಿ ಫೇಲ್ ಆಗಿದ್ದರು.
ಗಿಲ್ಲಿ ನಟ ಕೇವಲ ಜೋಕರ್ ನಂತೆ ಕಾಣುತ್ತಿರುವುದು ಅವರ ಪ್ರೀತಿಯ ಸೋಲಿಗೆ ಕಾರಣವಾಗಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಈಗ ಕಾಲ ಬದಲಾಗಿದೆ. ಸಾಮಾನ್ಯ ವ್ಯಕ್ತಿಯಾಗಿ ಈ ಹಿಂದೆ ಸೋತಿದ್ದ ಗಿಲ್ಲಿ ನಟ ಇಂದು ಬಿಗ್ ಬಾಸ್ ಟ್ರೋಫಿ ಗೆದ್ದ ವಿನ್ನರ್.
ಕುತೂಹಲಕಾರಿ ಸಂಗತಿಯೆಂದರೆ, ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ನಾನು ಮದುವೆಯಾಗುವ ಹುಡುಗ ಗಿಲ್ಲಿ ನಟನ ತರಹವೇ ಇರಬೇಕು ಎಂದು ಹೇಳುವ ಮೂಲಕ ಹೊಸ ಆಸೆ ಚಿಗುರಿಸಿದ್ದಾರೆ. ಗಿಲ್ಲಿಯ ಈವರೆಗಿನ ಫ್ಲಾಪ್ ಲವ್ ಸ್ಟೋರಿ ರಕ್ಷಿತಾ ಶೆಟ್ಟಿ ಮೂಲಕ ಸಕ್ಸಸ್ ಆಗುತ್ತಾ? ಅಥವಾ ಇದು ಕೇವಲ ದೊಡ್ಮನೆ ದೋಸ್ತಿಯಾಗಿ ಉಳಿಯುತ್ತಾ? ಕಾದು ನೋಡಬೇಕು.
ಇದನ್ನೂ ಓದಿ : ಗ್ರಾಮಗ್ರಾಮಗಳಲ್ಲೂ ಸದ್ದು ಮಾಡುತ್ತಿದೆ “ಗ್ರಾಮಾಯಣ” ಚಿತ್ರದ ಬೆಂಕಿ ಸಾಂಗ್!







