ನಟ ಧನುಷ್ ಮತ್ತು ಮೃಣಾಲ್ ಠಾಕೂರ್ ಮದುವೆಯ ವದಂತಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಇವರ ಡೇಟಿಂಗ್ ಬಗ್ಗೆ ಕೇಳಿಬರುತ್ತಿದ್ದ ಗಾಳಿಸುದ್ದಿ ಈಗ ಮದುವೆಯ ಚರ್ಚೆಗೆ ನಾಂದಿ ಹಾಡಿದ್ದು, ಈ ಜೋಡಿ ಈ ವರ್ಷದ ಪ್ರೇಮಿಗಳ ದಿನದಂದು (ಫೆಬ್ರವರಿ 14) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಧನುಷ್ ಮತ್ತು ಮೃಣಾಲ್ ವಿವಾಹವು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆಯಲಿದೆ.

ಆಗಸ್ಟ್ 2025ರಲ್ಲಿ ಮೃಣಾಲ್ ಅವರ ‘ಸನ್ ಆಫ್ ಸರ್ದಾರ್ 2’ ಪ್ರದರ್ಶನ ಹಾಗೂ ಧನುಷ್ ನಟನೆಯ ‘ತೇರೆ ಇಷ್ಕ್ ಮೇ’ ಚಿತ್ರದ ಪಾರ್ಟಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಈ ವದಂತಿಗೆ ಬಲ ನೀಡಿದೆ. ಅಲ್ಲದೆ, ಮೃಣಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಧನುಷ್ ಅವರ ಸಹೋದರಿಯರನ್ನು ಫಾಲೋ ಮಾಡುತ್ತಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ಇವರು ಡೇಟಿಂಗ್ ಮಾಡುತ್ತಿರುವುದು ನಿಜವಾದರೂ, ಸದ್ಯಕ್ಕೆ ಇದನ್ನು ಅಧಿಕೃತಗೊಳಿಸುವ ಉದ್ದೇಶ ಅವರಿಗಿಲ್ಲ.

ಕಳೆದ ವರ್ಷ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದ ಮೃಣಾಲ್, ಧನುಷ್ ಕೇವಲ ಒಳ್ಳೆಯ ಸ್ನೇಹಿತ ಎಂದು ಹೇಳುವ ಮೂಲಕ ಡೇಟಿಂಗ್ ಸುದ್ದಿಯನ್ನು ಅಲ್ಲಗಳೆದಿದ್ದರು. ದಿಢೀರ್ ಮದುವೆ ಸುದ್ದಿಯಿಂದ ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ಇದು ಕೇವಲ ವದಂತಿಯೇ ಅಥವಾ ಪ್ರೇಮಿಗಳ ದಿನದಂದು ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆಯೇ ಎಂಬುದು ಕಾದುನೋಡಬೇಕಿದೆ.







