ಕೋಟ್ಯಾಂತರ ಮೌಲ್ಯದ ರೈಲ್ವೆ ಜಾಗ ಒತ್ತುವರಿ – ಮನೆ, ಮಳಿಗೆಗಳಿಗೆ ತೆರವು ನೋಟಿಸ್ ಜಾರಿ!

ಬೀದರ್ : ಬೀದರ್ ಜಿಲ್ಲೆಯ ರೈಲ್ವೆ ಇಲಾಖೆಗೆ ಸೇರಿದ ಕೋಟ್ಯಾಂತರ ರೂಪಾಯಿ ಮೌಲ್ಯದ ಜಾಗವನ್ನು ಅತಿಕ್ರಮಿಸಿ ಮನೆ ಮತ್ತು ಮಳಿಗೆಗಳನ್ನು ನಿರ್ಮಿಸಿದವರಿಗೆ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದೆ. ಅಕ್ರಮ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.

ಬೀದರ್ ನಗರದ ಕೆಇಬಿ ಹತ್ತಿರದ ಗುಲ್ಲರ್ ಹವೇಲಿಯ ಸರ್ವೆ ನಂಬರ್ 31 ರಲ್ಲಿ ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡು ದಶಕಗಳಿಂದ ಮನೆ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಅಕ್ರಮ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಕಂದರಾಬಾದ್‌ನ ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಅಧಿಕಾರಿಗಳು, ಈಗ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.

ನಗರದ ನಂದಿ ಕಾಲೊನಿ ಮತ್ತು ಜ್ಯೋತಿ ಕಾಲೊನಿ ವ್ಯಾಪ್ತಿಯಲ್ಲಿರುವ ಅತಿಕ್ರಮಿತ ಕಟ್ಟಡಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಗೋಡೆಗಳ ಮೇಲೆ ನೋಟಿಸ್ ಅಂಟಿಸಿದ್ದಾರೆ. ಈ ನೋಟಿಸ್ ಮೂಲಕ ಅತಿಕ್ರಮಣದಾರರಿಗೆ ಕಡೆಯ ಎಚ್ಚರಿಕೆ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಸ್ವಯಂಪ್ರೇರಿತವಾಗಿ ಜಾಗ ಖಾಲಿ ಮಾಡಬೇಕು ಎಂದು ಸೂಚಿಸಲಾಗಿದೆ.  ಒಂದು ವೇಳೆ ನಿಗದಿತ ಸಮಯದಲ್ಲಿ ತೆರವುಗೊಳಿಸದಿದ್ದರೆ, ಇಲಾಖೆಯೇ ಜೆಸಿಬಿ ಮೂಲಕ ಕಟ್ಟಡಗಳನ್ನು ಧ್ವಂಸಗೊಳಿಸಿ ಜಾಗವನ್ನು ವಶಕ್ಕೆ ಪಡೆಯಲಿದೆ ಎಂದು ಎಚ್ಚರಿಸಲಾಗಿದೆ.

ರೈಲ್ವೆ ಇಲಾಖೆಯ ಈ ದಿಢೀರ್ ಕ್ರಮದಿಂದಾಗಿ ನಂದಿ ಕಾಲೊನಿ ಮತ್ತು ಜ್ಯೋತಿ ಕಾಲೊನಿಯ ಅತಿಕ್ರಮಿತ ಮನೆಗಳಲ್ಲಿ ವಾಸಿಸುತ್ತಿರುವವರಲ್ಲಿ ಆತಂಕ ಶುರುವಾಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಉಳಿಸಿಕೊಳ್ಳಲು ರೈಲ್ವೆ ಇಲಾಖೆ ಈಗ ಕಠಿಣ ನಿಲುವು ತಳೆದಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ : ಮದುವೆ ಮಾಡಿಲ್ಲ ಎಂದು ತಂದೆಯನ್ನೇ ಕೊಂದ ಪಾಪಿ ಮಗ!

Btv Kannada
Author: Btv Kannada

Read More