ಜೈಲಿನಲ್ಲಿರುವ ಕೈದಿಗಳ ಭೇಟಿಗೆ ಬಂದ ವೇಳೆ ಗಾಂಜಾ ಸಾಗಿಸಲು ಯತ್ನ – ಇಬ್ಬರ ಬಂಧನ!

ಶಿವಮೊಗ್ಗ: ಜೈಲಿನಲ್ಲಿರುವ ಕೈದಿಯನ್ನು ಭೇಟಿಯಾಗುವ ನೆಪದಲ್ಲಿ ಗಾಂಜಾ ಸಾಗಿಸಲು ಮಾಡಲು ಯತ್ನಿಸಿದ ಇಬ್ಬರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧಿಕಾರಿಗಳು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಯನ್ನು ಭೇಟಿಯಾಗಲು ಬಂದಿದ್ದ ಇಬ್ಬರ ವರ್ತನೆಯಿಂದ ಅನುಮಾನಗೊಂಡ ಸಿಬ್ಬಂದಿ ತಪಾಸಣೆ ನಡೆಸಿದಾಗ, ಪ್ಯಾಂಟ್‌ನಲ್ಲಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಿ ಪಾಳ್ಯದ ನಿವಾಸಿಗಳಾದ ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22) ಮತ್ತು ಅಜ್ಗರ್ ಅಲಿ ಅಲಿಯಾಸ್ ಅಜ್ಜು (21) ಎಂಬುವವರನ್ನು ಬಂಧಿಸಲಾಗಿದೆ. ಜೈಲು ಅಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ತುಂಗಾನಗರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಗಾಂಜಾ ಜಪ್ತಿ ಮಾಡಿದ್ದಾರೆ.

ಜೈಲಿಗೆ ಮಾದಕ ವಸ್ತು ಸಾಗಾಟದ ಹಿಂದೆ ಬೇರೆ ಯಾವುದಾದರೂ ಜಾಲವಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಅಧಿಕಾರಿಗಳ ಈ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ : ಸೇಡಂ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ – ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಸ್ಕ್ವಾಡ್!

Btv Kannada
Author: Btv Kannada

Read More