ಕಲಬುರಗಿ : ಕಲಬುರಗಿ ಜಿಲ್ಲೆಯ ಸೇಡಂ ತಹಶೀಲ್ದಾರ್ ಕಚೇರಿಗೆ ಇಂದು ಬೆಳ್ಳಂಬೆಳಿಗ್ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಚೇರಿಯ ಅಧಿಕೃತ ಇ-ಮೇಲ್ ಐಡಿಗೆ ಕಿಡಿಗೇಡಿಗಳು ಎರಡು ಪ್ರತ್ಯೇಕ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ತಹಶೀಲ್ದಾರ್ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಚೇರಿ ಆವರಣವನ್ನು ವಶಕ್ಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕಚೇರಿಯಿಂದ ಹೊರಗೆ ಕಳುಹಿಸಲಾಗಿದೆ. ಕಲಬುರಗಿಯಿಂದ ಆಗಮಿಸಿರುವ ಬಾಂಬ್ ಪತ್ತೆ ಮತ್ತು ಶ್ವಾನ ದಳದಿಂದ ಪ್ರತಿ ಮೂಲೆಯಲ್ಲೂ ತಪಾಸಣೆ ನಡೆಯುತ್ತಿದೆ. ಸದ್ಯ ಕಚೇರಿ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಈ ಇ-ಮೇಲ್ ಮೂಲದ ಬಗ್ಗೆ ಪೊಲೀಸರು ತಾಂತ್ರಿಕ ತಂಡದ ನೆರವಿನಿಂದ ತನಿಖೆ ಆರಂಭಿಸಿದ್ದಾರೆ. ಇದು ಹುಸಿ ಬೆದರಿಕೆಯೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದು ತಪಾಸಣೆ ನಂತರ ತಿಳಿಯಬೇಕಿದೆ. ಸದ್ಯ ಕಚೇರಿ ಆವರಣದಲ್ಲಿ ಆತಂಕ ಮನೆಮಾಡಿದ್ದು, ಸಾರ್ವಜನಿಕರು ಭಯಪಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕಾಫಿನಾಡಲ್ಲಿ ಮಂಗನ ಕಾಯಿಲೆ ಆತಂಕ – ಮತ್ತೊಂದು ಕೆಎಫ್ಡಿ ಪಾಸಿಟಿವ್ ಪ್ರಕರಣ ಪತ್ತೆ!







