ಚಿಕ್ಕಮಗಳೂರು : ಕಾಫಿನಾಡಲ್ಲಿ ಮಂಗನ ಕಾಯಿಲೆ (KFD) ಭೀತಿ ಮುಂದುವರಿದಿದ್ದು, ಎನ್.ಆರ್.ಪುರ ತಾಲೂಕಿನಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಎರಡಕ್ಕೇರಿದೆ.
ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದ 30 ವರ್ಷದ ಯುವಕನಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುವಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆ.ಎಫ್.ಡಿ ಸೋಂಕು ಇರುವುದು ತಿಳಿದುಬಂದಿದೆ. ಸೋಂಕಿತ ಯುವಕನನ್ನು ಸದ್ಯ ಕೊಪ್ಪ ಸರ್ಕಾರಿ ಆಸ್ಪತ್ರೆಯ ವಿಶೇಷ ಕೆ.ಎಫ್.ಡಿ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ಇಬ್ಬರಲ್ಲಿ ಕಾಯಿಲೆ ದೃಢಪಟ್ಟಂತಾಗಿದೆ. ಈಗಾಗಲೇ ಸೋಂಕು ತಗುಲಿದ್ದ ಮತ್ತೊಬ್ಬ ವ್ಯಕ್ತಿಗೆ ಇತರೆ ಆರೋಗ್ಯ ಸಮಸ್ಯೆಗಳಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಿನಮನೆ ಗ್ರಾಮದಲ್ಲಿ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಗ್ರಾಮದ ಪರಿಸ್ಥಿತಿಯನ್ನು ಪರಿಶೀಲಿಸಿದ ಅಧಿಕಾರಿಗಳು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮಸ್ಥರಿಗೆ ಮನೆಯ ಸುತ್ತಮುತ್ತಲಿನ ಶುಚಿತ್ವದ ಬಗ್ಗೆ ಮಾಹಿತಿ ನೀಡಲಾಗಿದ್ದು, ಅರಣ್ಯ ಪ್ರದೇಶಕ್ಕೆ ಹೋಗುವಾಗ ಜಾಗರೂಕರಾಗಿರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ತಾಯಿಯಿಂದ ಹಣ ವಿಳಂಬ – ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಗ!







