BMTCಯಲ್ಲಿ ಹಣವಿಲ್ಲದಿದ್ದರೂ ಶೋಕಿಗೆ ಕಡ್ಮೆ ಇಲ್ಲ – ಅಧ್ಯಕ್ಷ-ಉಪಾಧ್ಯಕ್ಷರಿಗೆ ಹೊಸ ಕಾರು ಕ್ರೇಜ್!

ಬೆಂಗಳೂರು : BMTC ಸದ್ಯ ಆರ್ಥಿಕ ಸಂಕಷ್ಟದ ಸುಳಿಯಲ್ಲಿದೆ. ಆದರೆ, ಸಂಸ್ಥೆಯ ಈ ದುಸ್ಥಿತಿಯ ನಡುವೆಯೂ BMTC ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಐಷಾರಾಮಿ ಜೀವನಕ್ಕೆ ಮಾತ್ರ ಯಾವುದೇ ಕೊರತೆಯಿಲ್ಲ. ನೌಕರರ ಬಾಕಿ ಸಂಬಳ ಕೊಡಲು ದುಡ್ಡಿಲ್ಲ, ಆದರೆ ಶೋಕಿಗೆ ಮಾತ್ರ ಕಮ್ಮಿಯಿಲ್ಲ ಎನ್ನುವಂತಾಗಿದೆ ಬಿಎಂಟಿಸಿಯ ಸದ್ಯದ ಪರಿಸ್ಥಿತಿ.

ಬಿಎಂಟಿಸಿ ಅಧ್ಯಕ್ಷ ಆರಾಧ್ಯ
    ಬಿಎಂಟಿಸಿ ಅಧ್ಯಕ್ಷ ಆರಾಧ್ಯ

BMTCಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ದಿನರಾತ್ರಿ ದುಡಿಯುವ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲು ಹಣವಿಲ್ಲದಂತಾಗಿದೆ. ನೌಕರರಿಗೆ ಬರಬೇಕಾದ ಬಾಕಿ ಸಂಬಳ ನೀಡಲು ಖಜಾನೆ ಖಾಲಿಯಾಗಿದೆ. ಸಿಬ್ಬಂದಿಗೆ ಸಮವಸ್ತ್ರ ವಿತರಿಸಲು ಕೂಡ ಹಣದ ಕೊರತೆ ಎದುರಾಗಿದೆ. ಬಸ್‌ಗಳ ದುರಸ್ತಿಗೆ ಬೇಕಾದ ಬಿಡಿಭಾಗಗಳನ್ನು ಖರೀದಿಸಲೂ ಹಣವಿಲ್ಲದೆ ಸಂಸ್ಥೆ ತತ್ತರಿಸುತ್ತಿದೆ.

ಉಪಾಧ್ಯಕ್ಷ ನಿಕೇತ್ ರಾಜ್
            ಉಪಾಧ್ಯಕ್ಷ ನಿಕೇತ್ ರಾಜ್

ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಬಿಎಂಟಿಸಿ ಅಧ್ಯಕ್ಷ ಆರಾಧ್ಯ ಅವರಿಗೆ ಹೊಸ ಐಷಾರಾಮಿ ಕಾರು ಮಂಜೂರಾಗಿದೆ. ಇದೀಗ ಬಿಎಂಟಿಸಿ ಅಧ್ಯಕ್ಷ KA-57, 6609 ನೋಂದಣಿ ಸಂಖ್ಯೆಯ ಹೊಸ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಸವಾರಿ ಮಾಡುತ್ತಿದ್ದಾರೆ. ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆಯೇ ಇತ್ತ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಗರಂ ಆಗಿದ್ದು, ನನಗೂ ಹೊಸ ಕಾರು ಬೇಕು ಎಂದು ಅವರು ಹಠ ಹಿಡಿದಿದ್ದಾರೆ. ಉಪಾಧ್ಯಕ್ಷರ ಈ ಬೇಡಿಕೆಯು ಅಧಿಕಾರಿಗಳನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ.

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಸಂಸ್ಥೆ ಸಂಕಷ್ಟದಲ್ಲಿದ್ದರೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಾರು ಕ್ರೇಜ್ ಕಡಿಮೆಯಾಗಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಮೇಖ್ರಿ ಸರ್ಕಲ್ ಟ್ರಾಫಿಕ್‌ಗೆ ಸಿಗಲಿದೆ ಮುಕ್ತಿ – 403 ಕೋಟಿಯ ಹೊಸ ಫ್ಲೈಓವರ್‌ಗೆ BDA ಟೆಂಡರ್!

Btv Kannada
Author: Btv Kannada

Read More