‘ರಕ್ಕಸಪುರದೋಳ್’ನಲ್ಲಿ ರಾಜ್ ಬಿ ಶೆಟ್ಟಿ ದರ್ಶನ – ಚಿತ್ರದಲ್ಲಿ ಶೆಟ್ರು ರಕ್ಷಕನೋ.. ರಾಕ್ಷಸನೋ?

ನಟ ರಾಜ್ ಬಿ. ಶೆಟ್ಟಿ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ‘ಸು ಫ್ರಂ ಸೋ’ ಚಿತ್ರದ ಮೂಲಕ ಭರ್ಜರಿ ಗೆಲವು ಕಂಡಿರುವ ರಾಜ್ ನಟನೆಯ ‘45’ ಸಿನಿಮಾ ಯಶಸ್ಸಿನತ್ತ ಮುನ್ನುಗುತ್ತಿದೆ. ಈಗಾಗಲೇ ಶೆಟ್ರ ಬಹುನಿರೀಕ್ಷಿತ ಚಿತ್ರ ‘ರಕ್ಕಸಪುರದೋಳ್’ ಟೀಸರ್ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಪ್ರಕೃತಿಯ ಮಡಿಲಲ್ಲಿರುವ ಸುಂದರ ಊರಿನ ದೃಶ್ಯಗಳೊಂದಿಗೆ ಟೀಸರ್ ಆರಂಭವಾಗುತ್ತದೆ. ಆದರೆ ಆ ಸೌಂದರ್ಯದ ಹಿಂದೆ ಸಾವು, ನೋವು ಹಾಗೂ ಮಾಟ-ಮಂತ್ರದ ಕರಾಳ ಛಾಯೆ ಇರುವುದು ಭಾಸವಾಗುತ್ತದೆ. ರಾಜ್ ಬಿ ಶೆಟ್ಟಿ ಅವರ ‘ಇವಿಲ್ ಐ’ ಮೂಲಕ ಪಾತ್ರದ ಪರಿಚಯವಾಗುವುದು ಈ ಟೀಸರ್‌ನ ಹೈಲೈಟ್. ರಾಜ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರೂ, ಇದು ನಾವು ರೆಗ್ಯುಲರ್ ಆಗಿ ನೋಡುವ ಮಾಸ್ ಪೊಲೀಸ್ ಪಾತ್ರವಲ್ಲ ಎಂಬ ಸುಳಿವು ಸಿಕ್ಕಿದೆ.

ಜೋಗಿ ಪ್ರೇಮ್ ಅವರ ಶಿಷ್ಯ ರವಿ ಸಾರಂಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೊಳ್ಳೇಗಾಲದ ಹಿನ್ನೆಲೆಯ ಈ ಕ್ರೈಮ್ ಥ್ರಿಲ್ಲರ್ ಕಥೆಯು, ಮನುಷ್ಯನೊಳಗಿನ ‘ದೈತ್ಯ’ನ ಕುರಿತಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡು ಮುಖಗಳಿರುತ್ತವೆ, ತನ್ನೊಳಗಿನ ಆ ಕತ್ತಲೆಯನ್ನೇ ವ್ಯಕ್ತಿಯೊಬ್ಬ ಎದುರಿಸಿದಾಗ ಏನಾಗುತ್ತದೆ ಎಂಬುದೇ ಚಿತ್ರದ ಸಾರಾಂಶ. ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ಈ ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿದಿದ್ದಾರೆ.

ಸದ್ಯ ’45’ ಚಿತ್ರದ ಯಶಸ್ಸಿನಲ್ಲಿರುವ ರಾಜ್ ಬಿ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ದುನಿಯಾ ವಿಜಯ್ ಜೊತೆಗಿನ ‘ಲ್ಯಾಂಡ್‌ಲಾರ್ಡ್’ ಜನವರಿಯಲ್ಲಿ ಬಿಡುಗಡೆಯಾಗಲಿದ್ದರೆ, ‘ರಕ್ಕಸಪುರದೋಳ್’ ಚಿತ್ರವು 2026ರ ಫೆಬ್ರವರಿ 6ಕ್ಕೆ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ರಾಜ್ ಬಿ ಶೆಟ್ಟಿ ಅವರ ಹೊಸ ಅವತಾರ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ : ಎರಡು ಸ್ಲೀಪರ್ ಕೋಚ್ ಬಸ್‌ಗಳ ನಡುವೆ ಭೀಕರ ಅಪಘಾತ – ನಾಲ್ವರಿಗೆ ಗಂಭೀರ ಗಾಯ!

Btv Kannada
Author: Btv Kannada

Read More