ಬೆಂಗಳೂರು : 2026ರ ಹೊಸ ವರ್ಷದ ಸಂಭ್ರಮಕ್ಕೆ ರಾಜ್ಯ ಸಜ್ಜಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ಸಂಭ್ರಮದ ನಡುವೆ ಸುರಕ್ಷತೆ ಮುಖ್ಯವಾಗಿದ್ದು, ಜವಾಬ್ದಾರಿಯುತವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಸಿಎಂ, ಬೆಂಗಳೂರಿಗರು ಸೇರಿದಂತೆ ರಾಜ್ಯದ ಸಮಸ್ತ ನಾಗರಿಕರಿಗೆ ಸುರಕ್ಷತೆಯ ಕುರಿತು ಹಲವು ಸಲಹೆಗಳನ್ನು ನೀಡಿದ್ದಾರೆ.
ಹೊಸ ವರ್ಷವನ್ನು ಸಡಗರ-ಸಂಭ್ರಮದಿಂದ ಆಚರಿಸಿ, ಆದರೆ ಯಾವುದೇ ಅಹಿತಕರ ಘಟನೆ ಅಥವಾ ಜೀವಹಾನಿಗೆ ಅವಕಾಶ ನೀಡಬೇಡಿ ಎಂದು ಸಿಎಂ ಕಿವಿಮಾತು ಹೇಳಿದ್ದಾರೆ. ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹಬ್ಬದ ಖುಷಿ ಯಾರ ಮನೆಯಲ್ಲೂ ಶೋಕವಾಗಿ ಬದಲಾಗಬಾರದು. ಹೀಗಾಗಿ ಪೊಲೀಸರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ವಿನಂತಿಸಿದ್ದಾರೆ.

ಹೊಸ ವರ್ಷಾಚರಣೆಯ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸಿಎಂ ಮಾಹಿತಿ ನೀಡಿದ್ದಾರೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದ್ದು, ನಿರಂತರ ಗಸ್ತು ಇರಲಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರಮುಖ ಸ್ಥಳಗಳಲ್ಲಿ ತುರ್ತು ಚಿಕಿತ್ಸಾ ಘಟಕ ಹಾಗೂ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸಹಾಯವಾಣಿಗಳು ಸಕ್ರಿಯವಾಗಿವೆ.
ಹೊಸ ವರ್ಷದ ಆಚರಣೆ ಜವಾಬ್ದಾರಿಯುತವಾಗಿರಲಿ. ಮಿತಿಮೀರಿದ ವೇಗ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ನೀಡುವ ಕೃತ್ಯಗಳಿಂದ ದೂರವಿರಿ. ಪೊಲೀಸರೊಂದಿಗೆ ಸಹಕರಿಸಿ ಶಾಂತಿಯುತವಾಗಿ 2026ನ್ನು ಸ್ವಾಗತಿಸೋಣ ಎಂದು ಸಿಎಂ ಶುಭ ಹಾರೈಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದ್ದು, ಸಾರ್ವಜನಿಕರ ಸಹಕಾರ ಕೋರಿದೆ.
ಇದನ್ನೂ ಓದಿ : ಬೆಂಗಳೂರಿಗರಿಗೆ BMRCLಯಿಂದ ಗುಡ್ ನ್ಯೂಸ್ – ಹೊಸ ವರ್ಷಕ್ಕೆ ಮುಂಜಾನೆ 3 ಗಂಟೆವರೆಗೂ ಮೆಟ್ರೋ ಸಂಚಾರ ವಿಸ್ತರಣೆ!







