ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ, ನಿರ್ದೇಶಕರಾಗಿ ಛಾಪು ಮೂಡಿಸಿರುವ ರಾಜ್ ಬಿ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ‘ಸು ಫ್ರಮ್ ಸೋ’ ಮೂಲಕ ಸಕ್ಸಸ್ ಕಂಡಿದ್ದ ರಾಜ್ ಬಿ ಶೆಟ್ಟಿ ಅವರ ’45’ ಸಿನಿಮಾ ಕೂಡ ರಿಲೀಸ್ ಆಗಿ ಯಶಸ್ಸಿನತ್ತ ಸಾಗುತ್ತಿದೆ. ಇದೀಗ ರಾಜ್ ಬಿ ಶೆಟ್ಟಿ ನಟನೆಯ ಬಹುನಿರೀಕ್ಷಿತ ರಕ್ಕಸಪುರದೊಳ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಟೈಟಲ್‌ನಿಂದಲೇ ಕುತೂಹಲ ಸೃಷ್ಟಿಸಿರುವ ಈ ಚಿತ್ರದ ಟೀಸರ್ ಇದೀಗ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಸದ್ಯ ಈ ಸಿನಿಮಾದ ಜಲಕ್ ಭಾರಿ ಕುತೂಹಲ ಮೂಡಿಸಿದೆ. ಜೋಗಿ ಪ್ರೇಮ್ ಅವರ ಶಿಷ್ಯರಾದ ರವಿ ಸಾರಂಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಕೊಳ್ಳೇಗಾಲದ ಹಿನ್ನೆಲೆಯಲ್ಲಿ ನಡೆಯುವ ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದರೂ, ಮನುಷ್ಯನ ಒಳಗಿರುವ ಕಾಣದ ‘ರಕ್ಕಸ’ನ ಗುಣದ ಆಧಾರವಾಗಿದೆ.

ಪ್ರಕೃತಿಯ ಮಡಿಲಲ್ಲಿರುವ ಸುಂದರ ಊರಿನ ದೃಶ್ಯಗಳೊಂದಿಗೆ ಟೀಸರ್ ಆರಂಭವಾಗುತ್ತದೆ. ಆದರೆ, ಕ್ಷಣಾರ್ಧದಲ್ಲೇ ಕಥೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಸಾವು, ನೋವು ಹಾಗೂ ಮಾಟ-ಮಂತ್ರದಂತಹ ಗೂಢ ವಿಷಯಗಳ ಸುತ್ತ ಕಥೆ ಸಾಗುವ ಸುಳಿವನ್ನು ಟೀಸರ್ ನೀಡುತ್ತದೆ. ವಿಶೇಷವಾಗಿ ರಾಜ್ ಬಿ ಶೆಟ್ಟಿ ಅವರ ‘ಇವಿಲ್ ಐ’ ಲುಕ್ ಮತ್ತು ಅವರ ಪಾತ್ರ ಪರಿಚಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೇ ಪಾತ್ರ ಇದೀಗ ಪ್ರೇಕ್ಷಕರಿಗೆ ಅರ್ಥ ಮಾಡಿಕೊಳ್ಳುವಲ್ಲಿ ಸವಾಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡು ಮುಖಗಳಿರುತ್ತವೆ. ತನ್ನೊಳಗಿನ ಕತ್ತಲೆಯನ್ನು ಅಥವಾ ದೈತ್ಯನನ್ನು ಎದುರಿಸುವ ಒಬ್ಬ ವ್ಯಕ್ತಿಯ ಸಂಘರ್ಷವೇ ಈ ಚಿತ್ರದ ಕಥೆ. ರಕ್ಕಸಪುರದೊಳ್ ಬಿಡುಗಡೆಗೆ ರೆಡಿಯಾಗಿದ್ದು, ಈ ಸಿನಿಮಾ 2026 ಫೆಬ್ರವರಿ 6ಕ್ಕೆ ತೆರೆಮೇಲೆ ಬರಲು ರೆಡಿಯಾಗಿದೆ.
ಇದನ್ನೂ ಓದಿ : ಹೈಪರ್ ಸ್ಫೋರ್ಟ್ಸ್‌ನಿಂದ ಮಾಧ್ಯಮ ಕ್ರಿಕೆಟ್ ಲೀಗ್ ಲೋಗೋ ಲಾಂಚ್ – ಮಹಿಳಾ ಕ್ಯಾನ್ಸರ್ ರೋಗಿಗಳ ನೆರವಿಗಾಗಿ ಟೂರ್ನಿ!







