ರಾಜ್ಯ ಸರ್ಕಾರ ಒಂದು ಧರ್ಮಕ್ಕೆ ಪರಿಹಾರ ನೀಡಲು ಮುಂದಾಗಿದೆ, ಇದು ತುಷ್ಠಿಕರಣ ರಾಜಕಾರಣದ ಪರಮಾವಧಿ – ಪ್ರಹ್ಲಾದ್ ಜೋಶಿ ಆಕ್ರೋಶ!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವು ಗೊಳಿಸಿದ ನಂತರ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಹೊಸದಾಗಿ ಮನೆ ನಿರ್ಮಾಣ ಮಾಡಲು ಮುಂದಾಗಿದೆ. ಇದೀಗ ಅನ್ಯ ಸಮುದಾಯಕ್ಕೆ ಮನೆ ನಿರ್ಮಿಸಿ ಕೊಡಲು ಮುಂದಾಗಿರುವ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಧರ್ಮದ ಓಲೈಕೆ ಹಾಗೂ ತುಷ್ಠಿಕರಣಕ್ಕಾಗಿ ಅತಿವೇಗವಾಗಿ ಹಾಗೂ ತುರ್ತಾಗಿ ಔಪಚಾರಿಕ ಪರಿಹಾರ ನೀಡಲು ಮುಂದಾಗಿರುವುದು ಅತಿ ಬೇಸರದ ಸಂಗತಿ. ಬರ ಮತ್ತು ಪ್ರವಾಹದಂತಹ ವಿಪತ್ತುಗಳ ಪರಿಹಾರವನ್ನು ಪಡೆಯಲು ರಾಜ್ಯಾದ್ಯಂತ ಜನರು ವರ್ಷಗಳಿಂದ ಕಾಯುತ್ತಿದ್ದರು, ಈ ಸಂದರ್ಭದಲ್ಲಿ, ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಕ್ಕದ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಕರೆ ಮಾಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ನಂತರ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ಪಕ್ಷದ ನಾಯಕತ್ವದ ಕೈಗೊಂಬೆಯಾಗಿ, ತನ್ನ ಕರ್ತವ್ಯ ಹಾಗೂ ಕಾನೂನಿನ ಪರಿಮಿತಿಯ ಜವಾಬ್ದಾರಿಯನ್ನು ಗಾಳಿಗೆ ತೂರಿ, ತುಷ್ಠಿಕರಣ ರಾಜಕಾರಣದ ಪರಮಾವಧಿಯನ್ನು ಪ್ರದರ್ಶಿಸಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಕಾಯಬಹುದೇ ವಿನಃ ಅಕ್ರಮವಾಗಿ ಅತಿಕ್ರಮಿಸಿದವರು ಕಾಯುವಂತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಕೋಗಿಲು ಲೇಔಟ್ ತೆರವು : ಅರ್ಹ ನಿವಾಸಿಗಳಿಗೆ 11.2 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ – ಸಿಎಂ ಸಿದ್ದರಾಮಯ್ಯ ಘೋಷಣೆ!

Btv Kannada
Author: Btv Kannada

Read More