ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳು ನೆಲಸಮ ಮಾಡಲಾಗಿತ್ತು. ಬಳಿಕ ಕೇರಳ ಸಿಎಂ ಪಿಣರಾಯ್ ವಿಜಯನ್, ಇದು ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಯುಪಿ ಮಾದರಿಯ ಬುಲ್ಡೋಜರ್ ರಾಜಕಾರಣ ಎಂದು ಟೀಕಿಸಿದ್ದರು. ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ್ದು, ಅರ್ಹರಿಗೆ 7 ಕಿ.ಮೀ ಅಂತರದಲ್ಲಿ ತಲಾ ಒಂದು ಮನೆಗೆ 11.2 ಲಕ್ಷ ರೂ ಮೌಲ್ಯದಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಹಂಚಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದೆ. ಅರ್ಹರಿಗೆ ಪರಿಹಾರದ ರೂಪದಲ್ಲಿ ಮನೆಗಳ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮನುಷ್ಯತ್ವ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ, ಇನ್ಮುಂದೆ ಈ ರೀತಿ ಯಾರೂ ಒತ್ತುವರಿ ಮಾಡದಂತೆ ಸೂಚಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಾಳೆ ಅಥವಾ ನಾಡಿದ್ದು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗುವುದು. ಡಿಸಿ, ಪಾಲಿಕೆ ಅಧಿಕಾರಿಗಳು ನೀಡುವ ಪಟ್ಟಿ ಆಧರಿಸಿ ಮನೆ ನೀಡಲಾಗುವುದು. ಈ ಬಗ್ಗೆ ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರೂ ಚರ್ಚಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಯೂ ವೇಣುಗೋಪಾಲ್ ಚರ್ಚಿಸಿದ್ದಾರೆ. ಆ ಜಾಗ ಬಿಟ್ಟು ಬೇರೆ ಕಡೆ ವ್ಯವಸ್ಥೆ ಮಾಡುವುದಾಗಿ ಅವರಿಗೆ ಹೇಳಿದ್ದೆ, ಅದರಂತೆ ಬೈಯಪ್ಪನಹಳ್ಳಿ ಸರ್ವೆ ನಂಬರ್ 23ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಹೊಸ ವರ್ಷದ ಆರಂಭದ ದಿನ ಮನೆ ನೀಡಲು ವಸತಿ ಸಚಿವ ಜಮೀರ್ ಒಪ್ಪಿದ್ದಾರೆ ಎಂದರು.
ಇದನ್ನೂ ಓದಿ : ಪವಿತ್ರಾ ಗೌಡಗೆ ಮನೆ ಊಟ – ಕೋರ್ಟ್ ಆದೇಶ!







