ಹಣ ಡಬಲ್ ಮಾಡೋದಾಗಿ ವಂಚನೆ – ಸ್ನೇಹಿತನಿಗೆ 86 ಲಕ್ಷ ಪಂಗನಾಮ ಹಾಕಿದ ಕಿರಾತಕ ಅರೆಸ್ಟ್!

ಬೆಂಗಳೂರು : ಹಣ ಡಬಲಿಂಗ್ ಮಾಡೋದಾಗಿ ಸ್ನೇಹಿತನಿಗೆ ಯಾಮಾರಿಸಿ ಬರೋಬ್ಬರಿ 86 ಲಕ್ಷ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ. ನಾಲ್ಕು ವರ್ಷದ ಕುಚುಕು ಗೆಳೆಯ ಹರೀಶ್ ಎಂಬಾತ ನಂಬಿಕೆ ದ್ರೋಹ ಮಾಡಿದ್ದಾನೆ.

ಆರೋಪಿ ಹರೀಶ್
                       ಆರೋಪಿ ಹರೀಶ್

ಆರೋಪಿ ಹರೀಶ್ ತಾನು ಎಂಜೆಲ್ ಬ್ರೋಕಿಂಗ್ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಚಂದ್ರಶೇಖರ್ ಬಳಿ ಹೇಳಿಕೊಂಡಿದ್ದ. ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಹಣ ಕೊಡೋದಾಗಿ ನಂಬಿಸಿದ್ದ. ಸ್ನೇಹಿತನ ಮಾತು ನಂಬಿ ಚಂದ್ರಶೇಖರ್ ಮೊದಲಿಗೆ 2 ಲಕ್ಷ ಹಣ ಹೂಡಿಕೆ ಮಾಡಿದ್ದ. ಕಳೆದ ಎರಡು ವರ್ಷದ ಹಿಂದೆ ಸತತ ಮೂರು ತಿಂಗಳು ಆರು ಲಕ್ಷ ಹೂಡಿಕೆ ಮಾಡಿದ್ದ. ನಂತರ ವಂಚಕ ಹರೀಶ್ ಹೂಡಿಕೆಯ ಹಣದ ಲಾಭಾಂಶ ನೀಡಿದ್ದ. ಇದನ್ನು ನಂಬಿದ ಚಂದ್ರಶೇಖರ್, ತನ್ನ ಹೆಂಡತಿ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿದ್ರು.

ಚಂದ್ರಶೇಖರ್
                    ಚಂದ್ರಶೇಖರ್

ಬರೋಬ್ಬರಿ 66 ಲಕ್ಷ ಹಣ ಸಾಲ ಪಡೆದು ಚಂದ್ರಶೇಖರ್ ಎಂಜೆಲ್ ನ್ರೋಕಿಂಗ್ ಕಂಪನಿಗೆ ಹೂಡಿಕೆ ಮಾಡಿದ್ದಾನೆ. ಇನ್ನು ಆರ್.ಟಿ.ಜಿ.ಎಸ್ ಮೂಲಕ 35 ಲಕ್ಷ ಹಣ ವರ್ಗಾವಣೆ ಮಾಡಿದ್ದ. ನಂತರ 31 ಲಕ್ಷ ಹಣವನ್ನ ಬ್ಯಾಂಕ್, ಫೋನ್ ಪೇ, ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಚಂದ್ರಶೇಖರ್ ನಗದು ರೂಪದಲ್ಲಿ ಬರೋಬ್ಬರಿ 20 ಲಕ್ಷ ಹಣ ನೀಡಿದ್ದ. ಕೆಂಗೇರಿ ಬಳಿಯ ಅಂಚಿಪಾಳ್ಯದ ಶ್ರೀನಿಧಿ ಹೋಟೆಲ್​ನಲ್ಲಿ 20 ಲಕ್ಷ ನಗದು ಹಣ ನೀಡಿದ್ದ.

ಜೂನ್ 2024 ರಲ್ಲಿ ಚಂದ್ರಶೇಖರ್ ಹಂತ ಹಂತವಾಗಿ 86 ಲಕ್ಷ ಹಣವನ್ನು ಕೊಟ್ಟಿದ್ದು, ಅದರ ಲಾಭಾಂಶ ಸೇರಿ 1.15 ಕೋಟಿ ಕೊಡೋದಾಗಿ ವಂಚಕ ಹರೀಶ್ ಹೇಳಿದ್ದ. ಕೆಲ ದಿನದ ನಂತರ ಐನಾತಿ ಹರೀಶ್ ಅಸಲಿ ಆಟ ಶುರುಮಾಡಿದ್ದ. ಕಮಿಷನ್ ವಿಷಯದಲ್ಲಿ ಸ್ವಲ್ಪ ತೊಂದರೆ ಇದೆ ಸ್ವಲ್ಪ ಸಮಯ ಕೊಡಿ ಅಂತ ಹೇಳಿದ್ದ. ಹಣ ಕೇಳಿದಾಗ ವಂಚಕ ಸಬೂಬು ಹೇಳಿಕೊಂಡು ಮುಂದಕ್ಕೆ ಹಾಕುತ್ತಿದ್ದ. ನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಕಾಲಿ ಮಾಡಿಕೊಂಡು ಪರಾರಿಯಾಗಿದ್ದ.

ಮೋಸ ಹೋದ ವಿಚಾರ ಗೊತ್ತಾಗ್ತಿದ್ದಂತೆ ಚಂದ್ರಶೇಖರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಹರೀಶ್ ವಿರುದ್ದ FIR ದಾಖಲಾಗಿತ್ತು. ಸದ್ಯ ಆರು ತಿಂಗಳ ಬಳಿಕ ಆರೋಪಿಯನ್ನ ಬಂಧಿಸಿದ್ದು, ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಮತ್ತಷ್ಟು ಜನರಿಗೆ ಹೀಗೆ ವಂಚನೆ ಮಾಡಿರೋ ಅನುಮಾನದ ಮೇಲೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ : ವೈಕುಂಠ ಏಕಾದಶಿ ಸಂಭ್ರಮ – ದಾಸನಪುರದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ!

Btv Kannada
Author: Btv Kannada

Read More