ಚಿಕ್ಕಮಗಳೂರು : ಮದ್ಯದ ಮತ್ತಿನಲ್ಲಿ ಸಿಗರೇಟ್ ವಿಚಾರಕ್ಕಾಗಿ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ, ಯುವಕನೋರ್ವನಿಗೆ ಚಾಕುವಿನಿಂದ ಇರಿದಿರುವ ಘಟನೆ ಚಿಕ್ಕಮಗಳೂರು ನಗರದ ಶಕ್ತಿನಗರದಲ್ಲಿ ನಡೆದಿದೆ.

ನಗರದ ಶಕ್ತಿನಗರದ ಬಾರ್‌ವೊಂದರಲ್ಲಿ ಎರಡು ಗ್ಯಾಂಗ್‌ಗಳ ನಡುವೆ ಸಿಗರೇಟ್ ಹಂಚಿಕೊಳ್ಳುವ ಅಥವಾ ಕೇಳುವ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಮದ್ಯದ ಅಮಲಿನಲ್ಲಿದ್ದ ಯುವಕರು ಪರಸ್ಪರ ಕಿರುಚಾಡಿಕೊಂಡಿದ್ದಾರೆ. ಈ ವೇಳೆ ಜಗಳ ತಾರಕಕ್ಕೇರಿ, ಒಂದು ಗುಂಪಿನ ಯುವಕ ಏಕಾಏಕಿ ತನ್ನ ಬಳಿಯಿದ್ದ ಚಾಕುವಿನಿಂದ ಎದುರಾಳಿ ಗುಂಪಿನ ಮೇಲೆ ದಾಳಿ ಮಾಡಿದ್ದಾನೆ.
ಈ ದಾಳಿಯಲ್ಲಿ ಮೂಗ್ತಿಹಳ್ಳಿ ಗ್ರಾಮದ ನಿವಾಸಿ ಅನಿಲ್ ಕುಮಾರ್ ಎಂಬುವವರಿಗೆ ಗಂಭೀರವಾಗಿ ಚಾಕು ಇರಿಯಲಾಗಿದೆ. ಹೊಟ್ಟೆ ಹಾಗೂ ದೇಹದ ಭಾಗಕ್ಕೆ ಇರಿತ ಬಿದ್ದ ಪರಿಣಾಮ ಅನಿಲ್ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಗಲಾಟೆ ನಡೆದ ಕೂಡಲೇ ಚಾಕು ಇರಿದ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ.

ಬಾರ್‌ನಲ್ಲಿ ನಡೆದ ಈ ಭೀಕರ ಗಲಾಟೆ ಮತ್ತು ಚಾಕು ಇರಿತದ ಸಂಪೂರ್ಣ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ (CCTV) ಸೆರೆಯಾಗಿದೆ. ಯುವಕರು ಹೇಗೆ ಪರಸ್ಪರ ಹೊಡೆದಾಡಿಕೊಂಡರು ಮತ್ತು ಚಾಕು ಇರಿದು ಹೇಗೆ ಪರಾರಿಯಾದರು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ತೀವ್ರವಾಗಿ ಗಾಯಗೊಂಡ ಅನಿಲ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು, ಚಾಕು ಇರಿದ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬಾಕ್ಸ್ ಆಫೀಸ್‌ನಲ್ಲಿ ’45’ ಅಬ್ಬರ – ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಸಿನಿಮಾ!







