ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ದರ ರಾಕೆಟ್ ವೇಗದಲ್ಲಿ ಏರುತ್ತಿದೆ. ಹಬ್ಬ ಹಾಗೂ ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ಬಂಗಾರ ಖರೀದಿಸಬೇಕೆಂದಿದ್ದ ಸಾಮಾನ್ಯ ಜನರಿಗೆ ಈ ಬೆಲೆ ಏರಿಕೆ ಆಘಾತ ನೀಡಿದೆ. ಇತಿಹಾಸದಲ್ಲೇ ಗರಿಷ್ಠ ಮಟ್ಟ ತಲುಪಿರುವ ಹಳದಿ ಲೋಹದ ನಾಗಾಲೋಟ ಮಾರುಕಟ್ಟೆಯಲ್ಲಿ ಮುಂದುವರಿದಿದೆ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಸದ್ಯದ ಮಾರುಕಟ್ಟೆ ಸ್ಥಿತಿಗತಿಯಿಂದಾಗಿ ಚಿನ್ನ ಸಾಮಾನ್ಯರ ಕೈಗೆಟುಕದಂತಾಗಿದೆ. 24 ಕ್ಯಾರೆಟ್ ಚಿನ್ನದ ದರ ಹತ್ತು ಗ್ರಾಂಗೆ ₹1,41,220 (ಪ್ರತಿ ಗ್ರಾಂಗೆ ₹14,122) ಏರಿಕೆಯಾಗಿದೆ. ಇನ್ನು, 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹12,945 ಹಾಗೂ 18 ಕ್ಯಾರೆಟ್ ಚಿನ್ನ ₹10,592 ತಲುಪಿದ್ದು, ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಚಿನ್ನದ ಬೆನ್ನಲ್ಲೇ ಬೆಳ್ಳಿ ದರವೂ ಗಗನಕ್ಕೇರುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ₹2,51,000 ತಲುಪಿದೆ. ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ ₹251 ಏರಿಕೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲ. ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ 2026ರ ಹೊಸ ವರ್ಷದಲ್ಲೂ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದೇ ನಾಗಾಲೋಟ ಮುಂದುವರಿದರೆ, ಸಾಮಾನ್ಯರ ಪಾಲಿಗೆ ಚಿನ್ನ ಕನಸಿನ ವಸ್ತುವಾಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ : ಸಿಎಂ ಮಾಡೋನು ನಾನಲ್ಲ, ಆಗೋನು ನಾನಲ್ಲ – ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ತಿಮ್ಮಾಪೂರ್ ಖಡಕ್ ರಿಯಾಕ್ಷನ್!







