ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೃಹತ್ ಡ್ರಗ್ಸ್ ದಂಧೆ ಬಯಲಾಗಿದೆ. ಈ ದಂಧೆಯನ್ನು ಪತ್ತೆಹಚ್ಚಿದ್ದು ನಮ್ಮ ಕರ್ನಾಟಕ ಪೊಲೀಸರಲ್ಲ, ಬದಲಾಗಿ ನೆರೆರಾಜ್ಯ ಮಹಾರಾಷ್ಟ್ರದ ಮಾದಕ ವಸ್ತು ನಿಗ್ರಹ ದಳ (ANTF). ಬೆಂಗಳೂರಿನ ಮೂರು ಕಡೆಗಳಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ

ಈ ಬೃಹತ್ ಜಾಲದ ನಂಟು ಮುಂಬೈನಲ್ಲಿ ಶುರುವಾಗಿತ್ತು. ಇತ್ತೀಚೆಗೆ ಮುಂಬೈ ಪೊಲೀಸರು ಅಬ್ದುಲ್ಲ ಖಾದರ್ ಶೇಕ್ ಎಂಬಾತನನ್ನು 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಮೇತ ಬಂಧಿಸಿದ್ದರು. ಈತನ ವಿಚಾರಣೆಯಲ್ಲಿ ಬೆಳಗಾವಿಯ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬ ಕಿಂಗ್‌ಪಿನ್ ಹೆಸರು ಪತ್ತೆಯಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಮಹಾರಾಷ್ಟ್ರ ANTF ಪೊಲೀಸರು ಪಾಟೀಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಬೆಂಗಳೂರಿನಲ್ಲಿ ಡ್ರಗ್ಸ್ ಉತ್ಪಾದನಾ ಫ್ಯಾಕ್ಟರಿಗಳಿರುವ ಮಾಹಿತಿ ಬಹಿರಂಗಗೊಂಡಿದೆ.
ಬೆಂಗಳೂರಿನ ಹೊರಮಾವು, ಯರಪ್ಪನಹಳ್ಳಿ ಮತ್ತು ಕಣ್ಣೂರಿನಲ್ಲಿ ‘RJ ಇವೆಂಟ್ಸ್’ ಹೆಸರಿನಲ್ಲಿ ಈ ದಂಧೆ ನಡೆಯುತ್ತಿತ್ತು. ಹೊರನೋಟಕ್ಕೆ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಂತೆ ಕಂಡರೂ, ಇಲ್ಲಿ ಗುಪ್ತವಾಗಿ ಅಪಾಯಕಾರಿ ಎಂಡಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಲಾಗುತ್ತಿತ್ತು.
ಕಾರ್ಯಾಚರಣೆ ವೇಳೆ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ ಎಂಡಿ ಡ್ರಗ್ಸ್ 4.1 ಕೆಜಿ ಘನ ಮತ್ತು 17 ಕೆಜಿ ದ್ರವ ರೂಪದ ಎಂಡಿ ಪತ್ತೆ. ಹಾಗೂ ತಯಾರಿಕಾ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಪಾಟೀಲ್ ಜೊತೆಗೆ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್‌ನನ್ನು ಬಂಧಿಸಲಾಗಿದೆ.
ನಗರದ ಹೊರವಲಯದಲ್ಲಿ ಬೃಹತ್ ಡ್ರಗ್ಸ್ ಫ್ಯಾಕ್ಟರಿಗಳಿದ್ದರೂ ಬೆಂಗಳೂರು ಪೊಲೀಸರಿಗೆ ಸುಳಿವು ಸಿಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ‘ಮಹಾರಾಷ್ಟ್ರ ಪೊಲೀಸರು ಬಂದು ದಾಳಿ ಮಾಡುವವರೆಗೂ ನಮ್ಮ ಖಾಕಿ ಪಡೆ ಏನು ಮಾಡುತ್ತಿತ್ತು?’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಫ್ಯಾಕ್ಟರಿಗಳಿಂದ ಕೇವಲ ಬೆಂಗಳೂರು ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳಿಗೆ ಡ್ರಗ್ಸ್ ಸಪ್ಲೈ ಆಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತರನ್ನು ಮಹಾರಾಷ್ಟ್ರ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಮುಂದುವರೆದ ಬೀದಿ ನಾಯಿಗಳ ಹಾವಳಿ – ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ.. ಗಂಭೀರ ಗಾಯ!







