ಬಾಗಲಕೋಟೆಯಲ್ಲಿ ಮುಂದುವರೆದ ಬೀದಿ ನಾಯಿಗಳ ಹಾವಳಿ – ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ.. ಗಂಭೀರ ಗಾಯ!

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನವನಗರದ ಸೆಕ್ಟರ್ 15ರಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 10 ವರ್ಷದ ಬಾಲಕಿ ಅಲೈನಾ ರಾಜೇಸಾಬ ಎಂಬಾಕೆಯ ಮೇಲೆ ನಾಯಿ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕಿಯ ಮುಖಕ್ಕೆ ನಾಯಿ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ.

ಬಾಲಕಿಯ ಮುಖ ಮತ್ತು ಕಣ್ಣಿನ ಭಾಗದಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ 4ನೇ ತರಗತಿಯ ವಿದ್ಯಾರ್ಥಿನಿ ಅಲೈನಾಳನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಆಕೆಯನ್ನು ನವನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮುಖದ ಮೇಲಿನ ಆಳವಾದ ಗಾಯಗಳು ಪೋಷಕರ ಆತಂಕಕ್ಕೆ ಕಾರಣವಾಗಿವೆ.

ಬಾಗಲಕೋಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದರೂ ನಗರಸಭೆ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತಿದೆ, ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಲಿ’ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಬೀದಿ ನಾಯಿಗಳ ಸಂತತಿ ನಿಯಂತ್ರಣ (ABC) ಯೋಜನೆ ಕೇವಲ ದಾಖಲೆಗೆ ಸೀಮಿತವಾಗದೆ ಕಟ್ಟುನಿಟ್ಟಾಗಿ ಜಾರಿಯಾಗಲಿ ಎಂಬುದು ಜನರ ಒತ್ತಾಯವಾಗಿದೆ.

ಇದನ್ನೂ ಓದಿ : ಬೈಕ್ ಮತ್ತು ಟಿಪ್ಪರ್​ ನಡುವೆ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಬೈಕ್ ಸವಾರ ಸಾವು, ದೇಹ ಛಿದ್ರ ಛಿದ್ರ!

Btv Kannada
Author: Btv Kannada

Read More