ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ – ಜಲಪಾತ ಬಂಡೆಗಳ ಮೇಲೆ ನಿಂತು ಪ್ರವಾಸಿಗರ ಮೋಜು-ಮಸ್ತಿ!

ಚಿಕ್ಕಮಗಳೂರು : ಮೂಡಿಗೆರೆಯ ಚಾರ್ಮಾಡಿ ಘಾಟಿಯ ಜಲಪಾತ ಹಾಗೂ ಬೆಟ್ಟಗಳ ನಡುವೆ ಪ್ರವಾಸಿಗರ ಅತಿರೇಕದ ವರ್ತನೆ ಮತ್ತು ಹುಚ್ಚಾಟಗಳು ಈಗ ಆತಂಕಕ್ಕೆ ಕಾರಣವಾಗಿವೆ.

ಚಳಿಗಾಲದಲ್ಲೂ ಚಾರ್ಮಾಡಿ ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಪಾಚಿ ಕಟ್ಟಿದ ಬಂಡೆಗಳು ವಿಪರೀತ ಜಾರುತ್ತಿವೆ. ಇಂತಹ ಅಪಾಯಕಾರಿ ಸ್ಥಳಗಳ ತುದಿಯಲ್ಲಿ ಪ್ರವಾಸಿಗರು ಫೋಟೋ ಮತ್ತು ರೀಲ್ಸ್‌ಗಾಗಿ ಪ್ರಾಣದ ಹಂಗು ತೊರೆದು ಸಾಹಸ ಮಾಡುತ್ತಿದ್ದಾರೆ.

ಅಪಘಾತ ತಡೆಗೆ ಇಲಾಖೆಯು ಎಚ್ಚರಿಕೆ ಫಲಕಗಳನ್ನು ಹಾಕಿದ್ದರೂ ಪ್ರವಾಸಿಗರು ಪೊಲೀಸರ ಕಣ್ಣುತಪ್ಪಿಸಿ ಜಲಪಾತಗಳ ಬಳಿ ಅಪಾಯಕಾರಿ ಸಾಹಸಕ್ಕಿಳಿಯುತ್ತಿದ್ದಾರೆ. ಈ ಹಿಂದೆ ಸೆಲ್ಫಿ ವ್ಯಾಮೋಹದಿಂದ ಹಲವರು ಕೈ-ಕಾಲು ಮುರಿದುಕೊಂಡಿದ್ದು, ಕೆಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಇಷ್ಟೆಲ್ಲಾ ಕಹಿ ಘಟನೆಗಳ ನಂತರವೂ ಪ್ರವಾಸಿಗರು ಎಚ್ಚೆತ್ತುಕೊಳ್ಳದಿರುವುದು ಆತಂಕದ ಸಂಗತಿ.

ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸರು ನಿರಂತರವಾಗಿ ಈ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾರೆ. ಆದರೆ ಪೊಲೀಸರು ಒಂದೆಡೆ ಹೋಗುತ್ತಿದ್ದಂತೆ, ಮತ್ತೊಂದೆಡೆ ಪ್ರವಾಸಿಗರು ಬಂಡೆಗಳ ಮೇಲೆ ಹತ್ತಿ ಮೋಜು ಮಾಡುತ್ತಿದ್ದಾರೆ. ಪ್ರವಾಸಿಗರ ಈ ಬೇಜವಾಬ್ದಾರಿ ವರ್ತನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮಂತ್ರಾಲಯದ ರಾಯರ ಮಠಕ್ಕೂ ತಟ್ಟಿದ ಭಾಷಾ ಸಂಘರ್ಷ – ಕನ್ನಡದ ಶ್ಲೋಕ ಫಲಕಕ್ಕೆ ತೆಲುಗು ಭಾಷಿಗರ ತೀವ್ರ ವಿರೋಧ!

Btv Kannada
Author: Btv Kannada

Read More