‘ಕೈ’ ಹೈಕಮಾಂಡ್ ಅಂಗಳಕ್ಕೆ ಸಿಎಂ ಕುರ್ಚಿ ಫೈಟ್ – ಇಂದು ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ವರಿಷ್ಠರು ಚರ್ಚೆ?

ನವದೆಹಲಿ : ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಚರ್ಚೆ ಈಗ ಹೈಕಮಾಂಡ್ ಅಂಗಳ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇಂದು ಬೆಳಿಗ್ಗೆ 10.30ಕ್ಕೆ ದೆಹಲಿಯ ಇಂದಿರಾ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ CWC ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರಂತಹ ಘಟಾನುಘಟಿ ನಾಯಕರು ಉಪಸ್ಥಿತರಿರಲಿದ್ದು, ಕರ್ನಾಟಕದ ನಾಯಕತ್ವದ ಗೊಂದಲದ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ.

ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ, ಅವರ ಆಪ್ತ ಸಚಿವರ ದಂಡೇ ದೆಹಲಿಗೆ ಆಗಮಿಸಿದೆ. ಕೆ.ಜೆ. ಜಾರ್ಜ್, ಡಾ. ಎಚ್.ಸಿ. ಮಹದೇವಪ್ಪ, ಬೈರತಿ ಸುರೇಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಸಿಎಂಗೆ ಸಾಥ್ ನೀಡುತ್ತಿರುವುದು. ಆಪ್ತ ಸಚಿವರ ಈ ಭೇಟಿ ಹೈಕಮಾಂಡ್ ಎದುರು ಸಿದ್ದರಾಮಯ್ಯ ನಡೆಸುತ್ತಿರುವ ಶಕ್ತಿ ಪ್ರದರ್ಶನ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಧಿಕಾರ ಹಂಚಿಕೆ ಸೂತ್ರ, ಸಂಪುಟ ಪುನಾರಚನೆ ಹಾಗೂ ಸಿದ್ದು- ಡಿಕೆಶಿ ನಡುವಿನ ಭಿನ್ನಮತ ಶಮನದ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಈ ಸಭೆಗೆ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಆಹ್ವಾನಿತರಲ್ಲದಿದ್ದರೂ, ಅವರ ಬೆಂಬಲಿಗರು ದೆಹಲಿಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೈಕಮಾಂಡ್ ನೀಡುವ ಸಂದೇಶದ ಮೇಲೆ ರಾಜ್ಯ ಸರ್ಕಾರದ ಮುಂದಿನ ಹಾದಿ ನಿರ್ಧಾರವಾಗಲಿದೆ.

ಇದನ್ನೂ ಓದಿ : ಮೈಸೂರು ಅರಮನೆ ಮುಂಭಾಗದ ಹೀಲಿಯಂ ಸ್ಫೋಟ – ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಚಿಕಿತ್ಸೆ ಫಲಿಸದೆ ಬೆಂಗಳೂರಿನ ಮಹಿಳೆ ಸಾವು!

Btv Kannada
Author: Btv Kannada

Read More