ಹಾವೇರಿಯ ಮಹಿಳಾ & ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಯಡವಟ್ಟು – ಸಿಸೇರಿಯನ್ ವೇಳೆ ನವಜಾತ ಶಿಶುಗೆ ಗಾಯ!

ಹಾವೇರಿ : ಹಾವೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸಿಸೇರಿಯನ್ ವೇಳೆ ನವಜಾತ ಶಿಶುವಿನ ತಲೆಗೆ ಬ್ಲೇಡ್ ತಗುಲಿ ತೀವ್ರ ರಕ್ತಸ್ರಾವವಾಗಿದೆ.

ರಾಣೇಬೆನ್ನೂರು ಮೂಲದ ಮಹಮ್ಮದ್ ಮುಜಾಹೀದ್ ಪತ್ನಿ ಬೀಬಿ ಅಪ್ಸಾ ಮೊದಲ ಹೆರಿಗೆಗಾಗಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಗರ್ಭದಲ್ಲಿ ನೀರಿನಂಶ ಕಡಿಮೆಯಿದೆ ಎಂದು ವೈದ್ಯರು ತುರ್ತು ಸಿಸೇರಿಯನ್‌ಗೆ ಸೂಚಿಸಿದ್ದರು. ವೈದ್ಯರ ಮಾತನ್ನು ನಂಬಿದ ಕುಟುಂಬಸ್ಥರು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು. ಆದರೆ ಆಪರೇಷನ್ ಥಿಯೇಟರ್‌ನಲ್ಲಿ ವೈದ್ಯರು ತೋರಿದ ನಿರ್ಲಕ್ಷ್ಯ ಈಗ ಮಗುವಿನ ಜೀವಕ್ಕೆ ಕುತ್ತು ತಂದಿದೆ. ಸಿಸೇರಿಯನ್ ಮಾಡುವ ಗಡಿಬಿಡಿಯಲ್ಲಿ ವೈದ್ಯರು ಬಳಸಿದ ಬ್ಲೇಡ್ ನೇರವಾಗಿ ನವಜಾತ ಶಿಶುವಿನ ತಲೆಗೆ ತಗುಲಿದೆ.

ಬ್ಲೇಡ್ ತಗುಲಿದ್ದರಿಂದ ಮಗುವಿನ ತಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ಸದ್ಯ ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ಐಸಿಯು (ICU) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಈ ಎಡವಟ್ಟು ದಂಪತಿಯ ಆತಂಕಕ್ಕೆ ಕಾರಣವಾಗಿದೆ.

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಬೀಬಿ ಅಪ್ಸಾ ಕುಟುಂಬಸ್ಥರು ಮತ್ತು ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಆರೋಗ್ಯಕ್ಕೆ ಸಂಚಕಾರ ತಂದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ವೇಳೆ ಆಗ್ರಹಿಸಿದರು.

ಇದನ್ನೂ ಓದಿ : ಉತ್ತರ ಕರ್ನಾಟಕ ಸೊಗಡಿನ “ಸೂರ್ಯ” ಸಿನಿಮಾದ ಟ್ರೈಲರ್ ರಿಲೀಸ್!

Btv Kannada
Author: Btv Kannada

Read More