ಹಾವೇರಿ : ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಬ್ರೇಕ್ ಬಿದ್ದಿದೆ. ಹರಳಹಳ್ಳಿ ಭಾಗದಲ್ಲಿ ಮರಳು ಲೂಟಿಯಾಗುತ್ತಿರುವ ಬಗ್ಗೆ BTV ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಇಂದು ಹರಳಹಳ್ಳಿ ವ್ಯಾಪ್ತಿಯಲ್ಲಿ ಮೆಗಾ ರೇಡ್ ನಡೆಸಿದ್ದಾರೆ.

ನದಿಯ ಮಧ್ಯಭಾಗದಲ್ಲಿ ಮರಳು ತೆಗೆಯಲು ಬಳಸುತ್ತಿದ್ದ ಅಕ್ರಮ ತಂತ್ರಗಳ ವಿರುದ್ಧ ಖನಿಜ ರಕ್ಷಣಾ ಪಡೆ ಸಮರ ಸಾರಿದೆ. ಕಾರ್ಯಾಚರಣೆ ವೇಳೆ ಮರಳು ತೆಗೆಯಲು ಬಳಸುತ್ತಿದ್ದ 8 ಬಿದಿರಿನ ಬೊಂಬು ತೆಪ್ಪಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು, ನದಿಯ ಮಧ್ಯದಲ್ಲೇ ಅವುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ನಾಶಪಡಿಸಲಾದ ತೆಪ್ಪಗಳು ಹಾಗೂ ಮರಳು ತೆಗೆಯಲು ಬಳಸುತ್ತಿದ್ದ ಸಾಮಗ್ರಿಗಳ ಒಟ್ಟು ಮೌಲ್ಯ ಸುಮಾರು 2.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಖನಿಜ ರಕ್ಷಣಾ ಪಡೆಯ ರಮೇಶ ಮತ್ತು ಶಿವಪ್ಪ ನದಿಗಿಳಿದು ಈ ಕಾರ್ಯಾಚರಣೆ ನಡೆಸಿದರು. ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಶಬ್ಬೀರ್ ಅಹಮದ್, ಕುಮಾರ್ ಹಾಗೂ ಸಿಬ್ಬಂದಿ ಜಯಪ್ಪ ಭಾಗಿಯಾಗಿದ್ದರು. ಅಕ್ರಮ ದಂಧೆಕೋರರ ವಿರುದ್ಧ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ : ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಅಪಸ್ವರ.. BYVಗೆ ದೇವೇಗೌಡ ಟಕ್ಕರ್ – ಏಕಾಂಗಿ ಸ್ಪರ್ಧೆ ಘೋಷಣೆ!







