ತಡರಾತ್ರಿ ಮೂವರು ಪುಂಡರಿಂದ ಯುವತಿಗೆ ಕಿರುಕುಳ – ಸುಮಾರು 2 ಕಿ.ಮೀ ಬೆನ್ನಟ್ಟಿದ ವಿಡಿಯೋ ವೈರಲ್!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತೆ ಆತಂಕ ಮೂಡಿಸಿದೆ. ಡಿಸೆಂಬರ್ 25ರ ಮಧ್ಯರಾತ್ರಿ ಸುಮಾರು 12 ಗಂಟೆಗೆ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಮೂವರು ಪುಂಡರು ಹಿಂಬಾಲಿಸಿದ್ದಾರೆ. ಬಿಟಿಎಂ ಲೇಔಟ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಗೆ, ಒಂದೇ ಬೈಕ್‌ನಲ್ಲಿ ಬಂದ ಕಿರಾತಕರು ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಕಿರುಕುಳ ನೀಡಿದ್ದಾರೆ.

ಪುಂಡರು ಯುವತಿಯನ್ನು ಹಿಂಬಾಲಿಸುವುದಷ್ಟೇ ಅಲ್ಲದೆ, ಪದೇ ಪದೇ ಓವರ್‌ಟೇಕ್ ಮಾಡಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಭಯಬೀಳಿಸಿದ್ದಾರೆ. ಸುಮಾರು 2 ಕಿ.ಮೀ ಉದ್ದಕ್ಕೂ ನಡೆದ ಈ ಪುಂಡಾಟದ ವೇಳೆ ಮೂವರೂ ಹೆಲ್ಮೆಟ್ ಧರಿಸಿರಲಿಲ್ಲ. ಯುವತಿಗೆ ಕಿರುಕುಳ ನೀಡುತ್ತಿದ್ದ ದೃಶ್ಯವನ್ನು ಅದೇ ರಸ್ತೆಯಲ್ಲಿ ಕಾರಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ, ಪುಂಡರು ಬೇಕೆಂದೇ ಯುವತಿಯ ಸ್ಕೂಟರ್‌ಗೆ ಅಡ್ಡಬಂದು ಸತಾಯಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ತಕ್ಷಣವೇ ಅದನ್ನು ಸಾಮಾಜಿಕ ಜಾಲತಾಣವಾದ ‘ಎಕ್ಸ್’ (X) ನಲ್ಲಿ ಹಂಚಿಕೊಂಡು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ದೂರು ನೀಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸುದ್ದುಗುಂಟೆ ಪಾಳ್ಯ ಪೊಲೀಸರು, ಎಕ್ಸ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಆಧಾರದ ಮೇಲೆ ಪುಂಡರು ಬಳಸಿದ ಬೈಕ್ ಸಂಖ್ಯೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೈಕ್ ಮಾಲೀಕ ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರನ್ನು ಪತ್ತೆ ಹಚ್ಚಲಾಗಿದ್ದು, ಶೀಘ್ರದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಪೊಲೀಸರು  ತಿಳಿಸಿದ್ದಾರೆ.

ಇದನ್ನೂ ಓದಿ : ’45’ ಸಿನಿಮಾಗೆ ಪೈರಸಿ ಕಾಟ – ಪೈರಸಿ ಮಾಡೋರ ವಿರುದ್ಧ ನಿರ್ಮಾಪಕ ರಮೇಶ್ ರೆಡ್ಡಿ ಕಿಡಿ!

Btv Kannada
Author: Btv Kannada

Read More