ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಅಪಸ್ವರ.. BYVಗೆ ದೇವೇಗೌಡ ಟಕ್ಕರ್ – ಏಕಾಂಗಿ ಸ್ಪರ್ಧೆ ಘೋಷಣೆ!

ಬೆಂಗಳೂರು : ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆ ಹಾಗೂ ವಿಧಾನಸಭೆಗೆ ಮಾತ್ರ ಸೀಮಿತವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಘೋಷಿಸಿದ್ದಾರೆ. ಪಕ್ಷ ಸಂಘಟನೆ ಮತ್ತು ಸರ್ಕಾರದ ವಿಫಲತೆಗಳ ಕುರಿತು ಅವರು ಮಾತನಾಡಿದರು.

ಜೆಡಿಎಸ್ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮುಖ್ಯ ಎಂದು ಗೌಡರು ಪ್ರತಿಪಾದಿಸಿದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ನಗರ ಪಾಲಿಕೆಗಳಲ್ಲಿ ಜೆಡಿಎಸ್ ತನ್ನ ಶಕ್ತಿ ಇರುವ ಕಡೆಗಳಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲಿದೆ. ಬಿಜೆಪಿ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಆದರೆ, ಪ್ರತಿಯೊಂದು ಸಣ್ಣ ಚುನಾವಣೆಯ ಸೀಟು ಹಂಚಿಕೆ ಬಗ್ಗೆ ಅವರೊಂದಿಗೆ ಚರ್ಚಿಸಲು ಸಾಧ್ಯವಿಲ್ಲ. ಮೈತ್ರಿ ಕೇವಲ ಎನ್‌.ಡಿ.ಎ ಚೌಕಟ್ಟಿನ ದೊಡ್ಡ ಚುನಾವಣೆಗಳಿಗೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಅಹಿಂದ’ ರಾಜಕಾರಣದ ಬಗ್ಗೆ ದೇವೇಗೌಡರು ತೀವ್ರ ವಾಗ್ದಾಳಿ ನಡೆಸಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಮುಸ್ಲಿಮರಿಗೆ ಮತ್ತು ನಾಯಕ ಸಮಜಕ್ಕೆ ಮೀಸಲಾತಿ ನೀಡಿದ್ದು ಯಾರು? ಅಹಿಂದ ವ್ಯಾಖ್ಯಾನ ಏನು? ಎಂದು ಪ್ರಶ್ನಿಸಿದ ಹೆಚ್.ಡಿ. ದೇವೇಗೌಡರು, ಒಳ ಮೀಸಲಾತಿ ಮತ್ತು ಬಜೆಟ್ ಹಂಚಿಕೆ ಕುರಿತು ಬಹಿರಂಗ ಚರ್ಚೆಗೆ ಸಿಎಂಗೆ ಸವಾಲು ಹಾಕಿದರು. ತಾವು ಆರಂಭಿಸಿದ ವಸತಿ ಶಾಲೆಗಳನ್ನು ನಂತರ ಬಂದ ಸರ್ಕಾರಗಳು ಮತ್ತು ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಹೇಗೆ ನಡೆಸಿಕೊಂಡರು ಎಂಬ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ಧಿಗೆ ಕೈಗೊಳ್ಳುತ್ತಿರುವ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ದೇವೇಗೌಡರು ದೂರಿದರು. ಹೆಚ್.ಎಂ.ಟಿ ಕಾರ್ಖಾನೆ ಪುನಶ್ಚೇತನ ಮತ್ತು ಭದ್ರಾವತಿಯ ಉಕ್ಕು ಕಾರ್ಖಾನೆಯನ್ನು ಉಳಿಸಲು ಕುಮಾರಸ್ವಾಮಿ ಶ್ರಮಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಭೂಮಿ ಮತ್ತು ಅದಿರು ನೀಡದೆ ಅಸಹಕಾರ ತೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅನಾರೋಗ್ಯದ ನಡುವೆಯೂ ಪಕ್ಷ ಸಂಘಟನೆ ಮುಂದುವರಿಸುವುದಾಗಿ ತಿಳಿಸಿದ ಗೌಡರು, ಜನವರಿ 18ರಂದು ಬೆಂಗಳೂರಿನಲ್ಲಿ ಮತ್ತು ಜನವರಿ 23ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸುವುದಾಗಿ ಘೋಷಿಸಿದರು.

ಇತ್ತೀಚೆಗೆ ನಿಧನರಾದ ಶಾಮನೂರು ಶಿವಶಂಕರಪ್ಪ ಅವರೊಂದಿಗಿನ 50 ವರ್ಷಗಳ ಸ್ನೇಹವನ್ನು ಸ್ಮರಿಸಿದ ಗೌಡರು, ಅನಾರೋಗ್ಯ ಹಾಗೂ ಡಯಾಲಿಸಿಸ್ ಕಾರಣದಿಂದ ದಾವಣಗೆರೆಯ ಶಿವಗಣಾರಾಧನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು. ತಾವು ಲೋಕೋಪಯೋಗಿ ಸಚಿವರಾಗಿದ್ದ ಕಾಲದಿಂದಲೂ ಶಾಮನೂರು ಆಪ್ತ ಒಡನಾಡಿಯಾಗಿದ್ದರು ಎಂದು ಅವರು ನೆನೆದರು.

ಇದನ್ನೂ ಓದಿ : ತಡರಾತ್ರಿ ಮೂವರು ಪುಂಡರಿಂದ ಯುವತಿಗೆ ಕಿರುಕುಳ – ಸುಮಾರು 2 ಕಿ.ಮೀ ಬೆನ್ನಟ್ಟಿದ ವಿಡಿಯೋ ವೈರಲ್!

Btv Kannada
Author: Btv Kannada

Read More