ಮಲ್ಟಿಸ್ಟಾರರ್ ’45’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಈಗ ಎಲ್ಲೆಲ್ಲೂ ’45’ ಸಿನಿಮಾ ಆರ್ಭಟ ಜೋರಾಗಿದ್ದು, ಮೊದಲ ದಿನವೇ 6 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ’45’ ಸಿನಿಮಾದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್. ಬಿ ಶೆಟ್ಟಿ ನಟಿಸಿ ಮೋಡಿ ಮಾಡಿದ್ದಾರೆ. 21ನೇ ಶತಮಾನದ ಕಥೆಗೆ ನಮ್ಮ ಪುರಾಣಗಳು, ಸನಾತನ ಧರ್ಮದ ಸಂಸ್ಕೃತಿ, ನಂಬಿಕೆಯನ್ನು ಸೇರಿಸಿ ಪ್ರಯೋಗಾತ್ಮಕ ಸಿನಿಮಾ ಮಾಡಿ ಚಿತ್ರತಂಡ ಗೆದ್ದಿದೆ.

ಶಿವಣ್ಣ, ರಾಜ್ ಬಿ ಶೆಟ್ಟಿ, ಉಪೇಂದ್ರ ಮೂವರನ್ನು ತೆರೆಯ ಮೇಲೆ ನೋಡೋದೆ ಅದ್ಬುತ. ತಮ್ಮ ನೆಚ್ಚಿನ ನಾಯಕ ನಟರನ್ನು ಒಂದೇ ಪರದೆಯಲ್ಲಿ ಕಂಡು ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. 45 ದಿನಗಳಲ್ಲಿ ನಡೆಯೋ ಕತೆಯಲ್ಲಿ ಕರ್ಮದ ಅದಿಪತಿಯಾಗಿ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಂಡ್ರೆ ಧರ್ಮದ ಅದಿಪತಿಯಾಗಿ ಶಿವಣ್ಣ ಶಿವತಾಂಡವವನ್ನೇ ತೋರಿಸಿದ್ದಾರೆ.

ತಪ್ಪಿಗೆ ಶಿಕ್ಷೆ ಕೊಡುವ ಯಮ, ನಂಬಿದವರನ್ನು ರಕ್ಷಿಸುವ ಶಿವ, ತಪ್ಪು ಮಾಡಿದರೆ ನರ ಮಾನವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಚಿತ್ರದಲ್ಲಿ ಸಾರಿ ಹೇಳಲಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಶಿವನ 11 ಅವತಾರಗಳ ದರ್ಶನ ಮಾಡಿ ಸಿನಿರಸಿಕರು ಭಕ್ತಿಪರವಶರಾಗುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಶಿವನನ್ನು ನೋಡಿ ಆರತಿ ಬೆಳಗಿ ಕೆಲವರು ನಮಿಸುತ್ತಿದ್ದಾರೆ. ಕೊನೆ ಅರ್ಧ ಗಂಟೆ ಚಪ್ಪಲಿ ಬಿಟ್ಟು ಸಿನಿಮಾ ನೋಡಿದೆವು ಎಂದು ಕೆಲವರು ಹೇಳುತ್ತಿದ್ದಾರೆ.

ಇತ್ತೀಚೆಗೆ ‘ಕಾಂತಾರ’, ‘ಅಖಂಡ’ ಸರಣಿ, ‘ಮಹಾವತಾರ್ ನರಸಿಂಹ’ ಚಿತ್ರಗಳಿಗೆ ಇಂಥದ್ದೇ ಪ್ರತಿಕ್ರಿಯೆ ಸಿಕ್ಕಿತ್ತು. ‘ಧುರಂಧರ್’, ‘ಚಾವ’ ಚಿತ್ರಗಳಲ್ಲಿ ಕೂಡ ಹಿಂದುತ್ವ, ಸನಾತನ ಧರ್ಮದ ಹಿರಿಮೆಯನ್ನು ಸಾರಿ ಹೇಳಲಾಗಿತ್ತು. ಇದೀಗ ’45’ ಚಿತ್ರದಲ್ಲಿ ಕೂಡ ಅದನ್ನು ನೋಡುತ್ತಿದ್ದೇವೆ. ನಮ್ಮದೇ ಮಣ್ಣಿನ ಕಥೆಯನ್ನು ಹೇಳಿದಾಗ ದೊಡ್ಡ ಯಶಸ್ಸು ಸಿಗುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಅರ್ಜುನ್ ಜನ್ಯಾ ಮರಣಾನಂತರದ ಜೀವನ ಮತ್ತು ಆತ್ಮದ ಪಯಣವನ್ನು ಗರುಡ ಪುರಾಣದ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಪಾಪ- ಪುಣ್ಯ, ಧರ್ಮ-ಕರ್ಮ ವಿಚಾರಗಳು ’45’ ಚಿತ್ರದಲ್ಲಿದೆ. ತೆರೆಮೇಲೆ ಶಿವನ ಆರ್ಭಟದ ದೃಶ್ಯ ವೈಭವ ಹೊಸ ಅನುಭವ ನೀಡುತ್ತದೆ. ಭಕ್ತಿಭಾವ ತುಂಬುತ್ತದೆ. 45 ಚಿತ್ರದಲ್ಲಿ ಶಿವಣ್ಣನ ಶಿವತಾಂಡವ ಈಗ ಶಿವನ ಭಕ್ತರಿಗೆ ಇಷ್ಟವಾಗಿದೆ. 45 ಚಿತ್ರ ದೈವ ಪ್ರೇರಿತ ಚಿತ್ರ ಎಂದು ಭಕ್ತಿಪೂರಕವಾಗಿ ಸಿನಿಮಾ ನೋಡ್ತಿದ್ದಾರೆ. ಇದೀಗ ಶಿವನ ಭಕ್ತರು 45 ಚಿತ್ರವನ್ನು ದೊಡ್ಡ ಮಟ್ಟಕ್ಕೆ ಗೆಲ್ಲಿಸುವ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಕನ್ನಡ ಮಂತ್ರಕ್ಕೆ ತೆಲುಗಿನವರ ವಿರೋಧ – ರಾಯರ ಮಠದಲ್ಲಿ ಭಾಷಾ ಸಂಘರ್ಷಕ್ಕೆ ಕಾರಣವೇನು?







