ಮೈಸೂರು ಅರಮನೆ ಬಳಿ ಭೀಕರ ದುರಂತ – ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಓರ್ವ ಬಲಿ, ಹಲವರಿಗೆ ಗಂಭೀರ ಗಾಯ!

ಮೈಸೂರು : ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ಗಳಿಗೆ ಹೀಲಿಯಂ ಅನಿಲ ತುಂಬುವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಅರಮನೆಯ ಮಾಗಿ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಜಮಾಯಿಸಿದ್ದ ವೇಳೆ, ಜಯಮಾರ್ತಾಂಡ ದ್ವಾರದ ಬಳಿ ಬಲೂನ್ ಅನಿಲ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಬಲೂನ್ ವ್ಯಾಪಾರಿ ಸಲೀಂ (40) ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಫೋಟದ ತೀವ್ರತೆಗೆ ದೇಹ ಛಿದ್ರಗೊಂಡಿದೆ.

ಸ್ಫೋಟದ ಭೀಕರತೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೆ ಕೇಳಿಸಿದ್ದು, ಸ್ಥಳದಲ್ಲಿದ್ದ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಿ (ಬೆಂಗಳೂರು), ಮಂಜುಳಾ (ನಂಜನಗೂಡು), ಶಹನಾಜ್ ಶಬ್ಬೀರ್ (ಕೋಲ್ಕತ್ತಾ), ಕೋಟ್ರೇಶ್ ಗುತ್ತೆ (ರಾಣೆಬೆನ್ನೂರು) ಹಾಗೂ ರಂಜಿತಾ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್  ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ವಿಧಿವಿಜ್ಞಾನ (FSL) ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿವೆ. ಹಬ್ಬದ ರಜೆಯ ಕಾರಣ ಅರಮನೆಯಲ್ಲಿ ಜನದಟ್ಟಣೆ ಹೆಚ್ಚಿದ್ದು, ಸ್ಫೋಟದಿಂದ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಕೃತ ಕಾಮಿಯ ಕಾಟ ..!

Btv Kannada
Author: Btv Kannada

Read More