ಬೀದರ್​ ಕೃಷಿ ಇಲಾಖೆ ಅಧಿಕಾರಿ ಮೇಲೆ ‘ಲೋಕಾ’ ದಾಳಿ – ಇನ್ನೂ ಸಸ್ಪೆಂಡ್ ಆಗಿಲ್ಲ ಭ್ರಷ್ಟ ಅಧಿಕಾರಿ ಧೂಳಪ್ಪ!

ಬೀದರ್ : ಲೋಕಾಯುಕ್ತ ದಾಳಿಯಲ್ಲಿ ಕೋಟಿಗಟ್ಟಲೆ ಅಕ್ರಮ ಹಣ ಪತ್ತೆಯಾದರೂ ಬೀದರ್ ಜಿಲ್ಲೆಯ ಔರಾದ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧೂಳಪ್ಪ ಇಂದಿಗೂ ಸೇವೆಯಲ್ಲಿ ಮುಂದುವರಿದಿದ್ದಾರೆ. ದಾಳಿ ನಡೆದು ಎರಡು ತಿಂಗಳಾದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಕ್ಟೋಬರ್ 14ರಂದು ಬೀದರ್ ಜಿಲ್ಲೆ ಔರಾದ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧೂಳಪ್ಪ ಅವರ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, 1 ಕೋಟಿ ರೂ.ಗೂ ಅಧಿಕ ಅಕ್ರಮ ನಗದು ವಶಪಡಿಸಿಕೊಂಡಿದ್ದರು. ಈ ಕುರಿತು ಲೋಕಾಯುಕ್ತ ಎಡಿಜಿಪಿಗೆ ವರದಿ ಸಲ್ಲಿಕೆಯಾಗಿ ಎರಡೂವರೆ ತಿಂಗಳು ಕಳೆದರೂ ಸರ್ಕಾರ ಈವರೆಗೆ ಅಧಿಕಾರಿಯನ್ನು ಅಮಾನತುಗೊಳಿಸಿಲ್ಲ. ಕೋಟಿಗಟ್ಟಲೆ ಹಣದೊಂದಿಗೆ ಸಿಕ್ಕಿಬಿದ್ದರೂ ಧೂಳಪ್ಪ ಅದೇ ಹುದ್ದೆಯಲ್ಲಿ ಮುಂದುವರಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಭ್ರಷ್ಟ ಅಧಿಕಾರಿಯ ಬೆನ್ನಿಗೆ ನಿಂತಿರುವ ಪ್ರಭಾವಿಗಳು ಯಾರು ಎಂಬ ಪ್ರಶ್ನೆ ಮೂಡಿದೆ.

ಲಕ್ಷಾಂತರ ರೂಪಾಯಿ ಲಂಚ ಪಡೆಯುವ ಕೆಳಹಂತದ ನೌಕರರನ್ನು ತಕ್ಷಣ ಅಮಾನತು ಮಾಡುವ ಸರ್ಕಾರ, ಕೋಟಿಗಟ್ಟಲೆ ಅಕ್ರಮ ಹಣದೊಂದಿಗೆ ಸಿಕ್ಕಿಬಿದ್ದ ಧೂಳಪ್ಪ ವಿಷಯದಲ್ಲಿ ಮೌನವಹಿಸಿರುವುದು ಏಕೆ? ಈ ಭ್ರಷ್ಟಾಚಾರದಲ್ಲಿ ಹಿರಿಯ ಅಧಿಕಾರಿಗಳ ಪಾಲಿದೆಯೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಯನ್ನು ಕಾನೂನುಬದ್ಧವಾಗಿ ಅಮಾನತುಗೊಳಿಸಬೇಕಿದ್ದರೂ, ಇಲ್ಲಿ ಪ್ರಭಾವವೇ ಮೇಲುಗೈ ಸಾಧಿಸಿದಂತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳುವುದೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ : ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಶೃಂಗೇರಿ ಶ್ರೀಗಳ ಜೊತೆ 1 ಗಂಟೆ ಚರ್ಚೆ ಮಾಡಿಲ್ಲ – ಶ್ರೀ ಮಠದ ಸ್ಪಷ್ಟನೆ!

Btv Kannada
Author: Btv Kannada

Read More