ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಶೃಂಗೇರಿ ಶ್ರೀಗಳ ಜೊತೆ 1 ಗಂಟೆ ಚರ್ಚೆ ಮಾಡಿಲ್ಲ – ಶ್ರೀ ಮಠದ ಸ್ಪಷ್ಟನೆ!

ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಇತ್ತೀಚೆಗೆ ಶೃಂಗೇರಿಗೆ ಹೋಗಿ ಶ್ರೀ ಶಾರದಮ್ಮನವರ ಹಾಗೂ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ದರ್ಶನವನ್ನು ಪಡೆದಿದ್ದಾರೆ. ಪಲ್ಲವಿ ಮತ್ತಿಘಟ್ಟ ಅವರು ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಜೊತೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ವಿಶೇಷ ಎಂದು ಲೋಕ ಧ್ವನಿ ಎಂಬ ಇ-ಪತ್ರಿಕೆ ಸುದ್ದಿ ಪ್ರಕಟಿಸಿತ್ತು. ಆದರೆ ಇದೀಗ ಶೃಂಗೇರಿ ಶ್ರೀಗಳ ಜೊತೆ ಕಿರುತೆರೆ ನಟಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರೋದು ಸುಳ್ಳು ಎಂದು ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ.

ಶೃಂಗೇರಿ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬಂದು ಶ್ರೀ ಶಾರದಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದು ಧನ್ಯತಾ ಭಾವದಿಂದ ಹಿಂತಿರುಗುತ್ತಿದ್ದಾರೆ. ಪ್ರಸ್ತುತ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರೇ ಭಕ್ತಾದಿಗಳಿಗೆ ದರ್ಶನವನ್ನು ನೀಡುತ್ತಿದ್ದು, ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಲೋಕಕಲ್ಯಾಣಕ್ಕಾಗಿ ಪ್ರತಿದಿನ ರಾತ್ರಿಯ ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು ತಾವೇ ನೆರವೇರಿಸಿ, ನಂತರ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ.

ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ವಿಜಯಯಾತ್ರೆಯನ್ನು ಕೈಗೊಂಡ ಸಂದರ್ಭದಲ್ಲಿ ಮಾತ್ರವೇ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಭಕ್ತಾದಿಗಳಿಗೆ ಮಧ್ಯಾಹ್ನ ಅಲ್ಪ ಸಮಯದಲ್ಲಿ ಮತ್ತು ರಾತ್ರಿಯ ಪೂಜೆಯ ನಂತರ ದರ್ಶನ ನೀಡುತ್ತಾರೆ.

ಡಿ.20ರಂದು ಲೋಕ ಧ್ವನಿ ಎಂಬ ಇ-ಪತ್ರಿಕೆಯಲ್ಲಿ ಪಲ್ಲವಿ ಮತ್ತಿಘಟ್ಟ ಎಂಬ ಕಿರುತೆರೆ ಖ್ಯಾತ ನಟಿ ಶೃಂಗೇರಿಗೆ ಬಂದು ಶ್ರೀ ಶಾರದಮ್ಮನವರ ಹಾಗೂ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ದರ್ಶನವನ್ನು ಪಡೆದಿರುತ್ತಾರೆ ಹಾಗೆಯೇ ಅವರು ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಬಳಿಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ವಿಶೇಷ ಎಂಬುದಾಗಿ ಸುದ್ದಿ ಪ್ರಕಟಿಸಿದ್ದರು.

ಆದರೆ ಎಲ್ಲರಿಗೂ ತಿಳಿದಿರುವಂತೆ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಇತ್ತೀಚಿನ ಕೆಲವು ವರ್ಷಗಳಿಂದ ಭಕ್ತ ಜನರಿಗೆ ಕೇವಲ ದರ್ಶನವನ್ನು ನೀಡಿ ಅನುಗ್ರಹಿಸುತ್ತಿದ್ದಾರೆಯೇ ಹೊರತು ಯಾರ ಬಳಿಯಲ್ಲೂ ದೀರ್ಘವಾಗಿ ಮಾತುಕತೆ ನಡೆಸಿರುವುದಿಲ್ಲ. ಪಲ್ಲವಿ ಮತ್ತಿಘಟ್ಟರವರು ಎಲ್ಲಾ ಭಕ್ತಾದಿಗಳಂತೆ ಶ್ರೀ ಶಾರದಾಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದಿರಬಹುದೇ ವಿನಃ ಇ-ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಒಂದು ಘಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಷಯ ಸುಳ್ಳು ಎಂದು ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ.

ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಶ್ರೀಮಠದ ಹಾಗೂ ಜಗದ್ಗುರುಗಳ ಕುರಿತಂತೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದಲ್ಲಿ ಕಾನೂನಿನ ಮೊರೆ ಹೋಗಲಾಗುವುದೆಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಭೀಕರ ಬಸ್ ಅಪಘಾತ – ಅದೃಷ್ಟವಶಾತ್ ಊರಿಗೆ ಹೊರಟಿದ್ದ​ ಯುವತಿಯರು ಗ್ರೇಟ್​ ಎಸ್ಕೇಪ್.. ಪಾರಾಗಿದ್ದೇಗೆ?

Btv Kannada
Author: Btv Kannada

Read More