ಚಿತ್ರದುರ್ಗ : ಚಿತ್ರದುರ್ಗ ಬಳಿ ಸೀಬರ್ಡ್ ಬಸ್ ಮತ್ತು ಲಾರಿ ಡಿಕ್ಕಿಯಾಗಿ 10 ಮಂದಿ ಸಜೀವ ದಹನವಾಗಿದ್ದಾರೆ. ಈ ಭೀಕರ ದುರಂತದ ಬೆನ್ನಲ್ಲೇ, ಕೂದಲೆಳೆ ಅಂತರದಲ್ಲಿ ಮತ್ತೊಂದು ದೊಡ್ಡ ಅನಾಹುತ ತಪ್ಪಿದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ರಾತ್ರಿ 8:30ಕ್ಕೆ ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ನಿಂದ ಹೊರಟಿದ್ದ ಸೀಬರ್ಡ್ ಸ್ಲೀಪರ್ ಬಸ್, 29 ಪ್ರಯಾಣಿಕರೊಂದಿಗೆ ಹೊರಟಿತ್ತು, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಚಿತ್ರದುರ್ಗದ ಬಳಿ ನಿಯಂತ್ರಣ ತಪ್ಪಿದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡು ಧಗಧಗನೆ ಉರಿಯಲಾರಂಭಿಸಿತು.
ಈ ಅಪಘಾತದ ಬೆನ್ನಲ್ಲೇ ಮತ್ತೊಂದು ದೊಡ್ಡ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸೀಬರ್ಡ್ ಬಸ್‌ನ ಹಿಂಬದಿಯಲ್ಲೇ ಶಾಲಾ ಮಕ್ಕಳಿದ್ದ ಪ್ರವಾಸಿ ಬಸ್ ಬರುತ್ತಿದ್ದು, ಚಾಲಕ ಸಚಿನ್ ಅವರ ಸಮಯಪ್ರಜ್ಞೆಯಿಂದಾಗಿ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ನಮ್ಮ ಕಣ್ಣ ಮುಂದೆಯೇ ಲಾರಿ ಬಸ್‌ಗೆ ಡಿಕ್ಕಿ ಹೊಡೆಯಿತು. ತಕ್ಷಣ ಬ್ರೇಕ್ ಹಾಕಿ ಬಸ್ ನಿಯಂತ್ರಿಸಿದ್ದರಿಂದ ಅಪಾಯ ತಪ್ಪಿತು. ಇಲ್ಲದಿದ್ದರೆ ನಮ್ಮ ಬಸ್ ಕೂಡ ಅಪಘಾತಕ್ಕೀಡಾಗುತ್ತಿತ್ತು. ಲಾರಿ ಡಿಕ್ಕಿಯಾದ ಕೂಡಲೇ ಕಿರುಚಾಡುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಲು ನಾನು ಕೂಡಲೇ ಕೆಳಗಿಳಿದು ಧಾವಿಸಿದೆ ಎಂದು ಪ್ರತ್ಯಕ್ಷದರ್ಶಿ ಚಾಲಕ ಸಚಿನ್ ಭೀಕರ ಕ್ಷಣವನ್ನು ಸ್ಮರಿಸಿದ್ದಾರೆ.
ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ 9 ಮಂದಿ ಬಸ್ ಹತ್ತುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಗುನಗುತ್ತಾ ಪ್ರವಾಸಕ್ಕೆ ಹೊರಟಿದ್ದವರಲ್ಲಿ 10 ಮಂದಿ ಬೆಂಕಿಗಾಹುತಿಯಾಗಿರುವುದು ದುರದೃಷ್ಟಕರ. ಬಸ್‌ನಲ್ಲಿದ್ದ 29 ಪ್ರಯಾಣಿಕರ ಪೈಕಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಘಟನೆ ಸಂಬಂಧ ಟ್ರಾವೆಲ್ಸ್ ಮಾಲೀಕ ನಾಗರಾಜ್‌ಗೆ ಪೊಲೀಸರು ಬುಲಾವ್ ನೀಡಿದ್ದು, ತಕ್ಷಣ ಚಿತ್ರದುರ್ಗಕ್ಕೆ ಬರುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ : ಸೀಬರ್ಡ್ ಸ್ಲೀಪರ್ ಬಸ್ ಧಗಧಗ – 10ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನ!







