ಚಿತ್ರದುರ್ಗ : ಹೈದರಾಬಾದ್ ಬಸ್ ದುರಂತದ ಬೆನ್ನಲ್ಲೇ ಚಿತ್ರದುರ್ಗದ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಲಾರಿ ಹಾಗೂ ಖಾಸಗಿ ಬಸ್ ನಡುವಿನ ಡಿಕ್ಕಿಯಿಂದಾಗಿ ಬಸ್ ಬೆಂಕಿಗಾಹುತಿಯಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಬಸ್‌ಗೆ, ಹಿರಿಯೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಲಾರಿ ಡಿವೈಡರ್ ದಾಟಿ ಬಸ್‌ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಬಸ್ ತಕ್ಷಣವೇ ಬೆಂಕಿಗಾಹುತಿಯಾಗಿದೆ.

32 ಸೀಟುಗಳ ಈ ಬಸ್‌ನಲ್ಲಿ 15 ಮಹಿಳೆಯರು ಹಾಗೂ 14 ಪುರುಷರು ಸೇರಿದಂತೆ ಒಟ್ಟು 29 ಪ್ರಯಾಣಿಕರಿದ್ದರು. ಬೆಂಕಿ ವೇಗವಾಗಿ ಹರಡಿದ್ದರಿಂದ ಮಲಗಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗದೆ 10ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಸಿರಾ ಹಾಗೂ ಚಿತ್ರದುರ್ಗದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.
ಬಸ್‌ನಲ್ಲಿ ಗೋಕರ್ಣದ 25 ಜನ, ಕುಮಟಾ ಹಾಗೂ ಶಿವಮೊಗ್ಗದ ತಲಾ ಇಬ್ಬರು ಪ್ರಯಾಣಿಕರಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಮಂಜುನಾಥ್, ಸಂಧ್ಯಾ, ಶಶಾಂಕ್, ದಿಲೀಪ್, ಪ್ರೀತೀಶ್ವರನ್, ವಿ. ಬಿಂದು, ಕೆ. ಕವಿತಾ, ಅನಿರುದ್ಧ್ ಬೆನರ್ಜಿ, ಅಮೃತಾ, ಇಶಾ, ಸೂರಜ್, ಮಾನಸ, ಮಿಲನಾ, ಹೇಮರಾಜ್ ಕುಮಾರ್, ಕಲ್ಪನಾ ಪ್ರಜಾಪತಿ, ಎಂ. ಶಶಿಕಾಂತ್, ವಿಜಯ್ ಭಂಡಾರಿ, ನವ್ಯಾ, ಅಭಿಷೇಕ್, ಹೆಚ್. ಕಿರಣ್ ಪಾಲ್ ಹಾಗೂ ಎಂ. ಕೀರ್ತನ್ ಅವರ ಹೆಸರಿದೆ.

ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಎಸ್‌ಪಿ ರಂಜಿತ್ ಕುಮಾರ್ ಹಾಗೂ ಐಜಿ ರವಿಕಾಂತೇ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸುಟ್ಟು ಕರಕಲಾದ ಶವಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ : ಮಾರ್ಕ್ ಸಿನಿಮಾದ ಕಾಳಿ ಸಾಂಗ್ ರಿಲೀಸ್ – ತ್ರಿಶೂಲ ಹಿಡಿದು ರುದ್ರಾವತಾರ ತಾಳಿದ ಕಿಚ್ಚ!







