ಮೈಸೂರು : ರಾಜ್ಯದಲ್ಲಿ ಪ್ರಭಾವಿ ರಾಜಕಾರಣಿಗಳ ಆಸ್ತಿಗೂ ಭೂ ಮಾಫಿಯಾದ ಸಂಚಕಾರ ಶುರುವಾಗಿದೆ. ಬಿಜೆಪಿ ಮಾಜಿ ಎಂಎಲ್‌ಸಿ ಸಿದ್ದರಾಜು ಅವರಿಗೆ ಸೇರಿದ ಸುಮಾರು 25 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿರುವ ರೋಚಕ ಪ್ರಕರಣ ಬೆಳಕಿಗೆ ಬಂದಿದೆ.

ಮೈಸೂರಿನ ವಿಜಯನಗರ 3ನೇ ಹಂತದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ಹೈಟೆಕ್ ದಂಧೆ ನಡೆದಿದೆ. ಕೇರ್ಗಳ್ಳಿ ವ್ಯಾಪ್ತಿಯ ಸರ್ವೆ ನಂಬರ್ 189 ರಿಂದ 208ರ ಒಳಗಿನ ಸಿದ್ದರಾಜು ಅವರಿಗೆ ಸೇರಿದ 20 ನಿವೇಶನಗಳನ್ನು ಕಬಳಿಸಲು ರಿಯಲ್ ಎಸ್ಟೇಟ್ ಮಾಫಿಯಾ ಹೊಂಚು ಹಾಕಿತ್ತು. ಇದಕ್ಕಾಗಿ ಅವರ ಹೆಸರಿನಲ್ಲೇ ನಕಲಿ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಸೃಷ್ಟಿಸಲಾಗಿತ್ತು. ಅಲ್ಲದೆ, ಸಿದ್ದರಾಜು ಅವರಂತೆ ಕಾಣುವ ವ್ಯಕ್ತಿಯನ್ನು ಕಚೇರಿಗೆ ಕರೆತಂದು, ಆತನ ಫೋಟೋ ಹಾಗೂ ಸಹಿ ಬಳಸಿ ಆಸ್ತಿ ವರ್ಗಾಯಿಸಲು ಸ್ಕೆಚ್ ಹಾಕಲಾಗಿತ್ತು.
ನೋಂದಣಿ ವೇಳೆ ಫೋಟೋ ತೆಗೆಸಲು ಕೂತ ವ್ಯಕ್ತಿಯ ನಡವಳಿಕೆ ಕಂಡು ಸಿಬ್ಬಂದಿಗೆ ಅನುಮಾನ ಬಂದಿದೆ. ದಾಖಲೆಗಳ ಪರಿಶೀಲನೆಗೆ ಮುಂದಾದಾಗ, ಸಿಕ್ಕಿಬೀಳುವ ಭೀತಿಯಿಂದ ಖದೀಮರು ಕಚೇರಿಯಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಬೆಚ್ಚಿಬಿದ್ದ ಸಿದ್ದರಾಜು ಅವರು ಕೂಡಲೇ ಸಬ್ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಲೂಟಿ ಮಾಡಲು ದೊಡ್ಡ ಜಾಲವೇ ಸಂಚು ರೂಪಿಸಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದು, ಪೊಲೀಸರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಅಶ್ಲೀಲ ಕಮೆಂಟ್ ಮಾಡಿದವರಿಗೆ ವಿಜಯಲಕ್ಷ್ಮಿ ದರ್ಶನ್ ತಿರುಗೇಟು – 150ಕ್ಕೂ ಹೆಚ್ಚು ಸ್ಕ್ರೀನ್‌ಶಾಟ್ ಸಮೇತ ಸೈಬರ್ ಕ್ರೈಂಗೆ ದೂರು!







