ಬೆಂಗಳೂರು : ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪರ್ಸನಲ್ ಸೆಕ್ರೆಟರಿ (PS) ಸರ್ಫರಾಜ್ ಖಾನ್ ನಿವಾಸ ಹಾಗೂ ಸಂಬಂಧಿಕರ ಮನೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಐದು ಕಡೆ ಇಂದು ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಸರ್ಚ್ ಆಪರೇಷನ್ ನಡೆಸಿದ್ದಾರೆ. ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಸರ್ಫರಾಜ್ ಖಾನ್ ನಿವಾಸ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ನಡೆದಿದೆ. ಹೌಸಿಂಗ್ ಬೋರ್ಡ್ ಹಾಗೂ ಸ್ಲಂ ಬೋರ್ಡ್ ಕೆಲಸಗಳಲ್ಲಿ ಮಧ್ಯಸ್ಥಿಕೆ ವಹಿಸಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ ದೂರಿನ ಹಿನ್ನೆಲೆಯಲ್ಲಿ, ಅಧಿಕಾರಿಗಳು ಈಗ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ವೇಳೆ ಸರ್ಫರಾಜ್ ಖಾನ್ ಹೆಸರಿನಲ್ಲಿರುವ ರೆಸಾರ್ಟ್‌ಗಳು ಹಾಗೂ ಐಷಾರಾಮಿ ಮನೆಗಳ ಪತ್ತೆಯಾಗಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಭಾರಿ ಮೊತ್ತದ ಬ್ಯಾಂಕ್ ವಹಿವಾಟು ಹಾಗೂ ಬ್ಯಾಲೆನ್ಸ್‌ಗೆ ಸಂಬಂಧಿಸಿದ ಪಾಸ್‌ಬುಕ್‌ಗಳು ಮತ್ತು ಆಸ್ತಿ ಪತ್ರಗಳನ್ನು ಲೋಕಾಯುಕ್ತ ಪೊಲೀಸರು ಈಗಾಗಲೇ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಐದು ಕಡೆ ತಪಾಸಣೆ ಮುಂದುವರಿದಿದ್ದು, ಅಕ್ರಮ ನಗದು, ಚಿನ್ನಾಭರಣ ಹಾಗೂ ಬೇನಾಮಿ ಆಸ್ತಿ ಪತ್ರಗಳ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ದಿಢೀರ್ ದಾಳಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ವಲಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ – ಜ್ಞಾನಭಾರತಿ ಠಾಣೆಯಲ್ಲಿ BNS ಅಡಿ FIR ದಾಖಲು!







