ಬೆಂಗಳೂರು : ಚಿಕ್ಕಮಗಳೂರು ಮೂಲದ ಯುವತಿಯ ಮೇಲೆ ಇನ್‌ಸ್ಟಾಗ್ರಾಂ ಪರಿಚಿತ ನವೀನ್ ಕುಮಾರ್ ಎಂಬಾತ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾನೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಯುವತಿಯರಿಗೆ ರಕ್ಷಣೆ ಇಲ್ಲವೇ? ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ, ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ ದಾಳಿ ನಡೆಸಿರುವ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಮೂಲತಃ ಚಿಕ್ಕಮಗಳೂರಿನ ಈ ಯುವತಿ, ಬೆಂಗಳೂರಿನ ನಾಗರಭಾವಿಯ ಕಚೇರಿಯೊಂದರಲ್ಲಿ ಟೆಲಿ ಕಾಲರ್ ಆಗಿ ಕೆಲಸ ಮಾಡುತ್ತಿದ್ದರು. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಯಲಹಂಕದ ನವೀನ್ ಕುಮಾರ್, ಸ್ನೇಹದ ನಂತರ ಪ್ರೀತಿಸುವಂತೆ ಆಕೆಗೆ ಪೀಡಿಸಲು ಶುರು ಮಾಡಿದ್ದನು.

ನವೀನ್‌ನ ನಡವಳಿಕೆಯಿಂದ ಯುವತಿ ಅಂತರ ಕಾಯ್ದುಕೊಂಡಿದ್ದಕ್ಕೆ ಕೆರಳಿದ ಆರೋಪಿ, ಆಕೆಯ ಪಿಜಿ ಬಳಿಯೇ ಬಂದು ಕಿರುಕುಳ ನೀಡತೊಡಗಿದ್ದಾನೆ. ಯುವತಿ ಗೆಳತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದು ಅಡ್ಡಗಟ್ಟಿದ ನವೀನ್, ಆಕೆಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕರು ಜಮಾಯಿಸುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದು, ಈ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಬಿಎನ್‌ಎಸ್ (BNS) ಅಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ನವೀನ್ ವಿರುದ್ಧ BNS ಸೆಕ್ಷನ್ 74, 75, 76, 78, 79 ಹಾಗೂ 351(2)ರ ಅಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಡಿವೋರ್ಸ್ ನೋಟಿಸ್ ನೀಡಿದ್ದಕ್ಕೆ ಪತ್ನಿಯ ಹತ್ಯೆ – ಮಾಗಡಿ ರೋಡ್ ಪೊಲೀಸರಿಂದ ಆರೋಪಿ ಪತಿಯ ‘ಡ್ರಿಲ್’!







