ಬೆಂಗಳೂರು : ಪತ್ನಿ ಡಿವೋರ್ಸ್ ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಪತಿ ಬಾಲಮುರುಗನ್, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ನಿ ಭುವನೇಶ್ವರಿಯನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ದಂಪತಿ ನಡುವಿನ ಕೌಟುಂಬಿಕ ಕಲಹ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಸಂಚು ರೂಪಿಸಿ ಈ ಕೃತ್ಯ ಎಸಗಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಮಾಗಡಿ ರೋಡ್ ಪೊಲೀಸರು, ಕೃತ್ಯಕ್ಕೆ ಬಳಸಿದ ಪಿಸ್ತೂಲ್‌ನ ಮೂಲದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಪಿಸ್ತೂಲ್ ಮೂಲದ ಪತ್ತೆಯೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆರೋಪಿ ಬಾಲಮುರುಗನ್ ಬಳಸಿದ ಪಿಸ್ತೂಲ್‌ಗೆ ಲೈಸೆನ್ಸ್ ಇತ್ತೇ ಅಥವಾ ಅಕ್ರಮವಾಗಿ ಖರೀದಿಸಲಾಗಿದೆಯೇ ಎಂದು ಮಾಗಡಿ ರಸ್ತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾರಕಾಸ್ತ್ರ ನೀಡಿದವರು ಯಾರು ಮತ್ತು ಹತ್ಯೆಗೆ ಎಷ್ಟು ದಿನಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬ ಬಗ್ಗೆ ಕಳೆದ ರಾತ್ರಿಯಿಂದಲೇ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ : ಪ್ರತಿಷ್ಠಿತ ಜ್ಯುವೆಲರ್ಸ್‌ನಲ್ಲಿ ಕಳ್ಳತನ – 70 ಕೆಜಿ ಬೆಳ್ಳಿ ಆಭರಣ ದೋಚಿದ ಖದೀಮರು!







