ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಪತ್ರ ಸಂಚಲನ ಶುರುವಾಗಿದ್ದು, ಸಚಿವ ಕೆ.ಎನ್. ರಾಜಣ್ಣ ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ಬರೆದ 8 ಪುಟಗಳ ಸುದೀರ್ಘ ಪತ್ರ. ಪತ್ರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸಿದ್ದರಾಮಯ್ಯ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನವೆಂಬರ್ 17ರಂದು ಪತ್ರ ಬರೆದಿರುವ ಕೆ.ಎನ್. ರಾಜಣ್ಣ, ಮತಗಳ್ಳತನದ ಕುರಿತಾದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿ ತಪ್ಪು ಮಾಹಿತಿ ನೀಡುವ ಮೂಲಕ ಪಿತೂರಿ ನಡೆಸಲಾಗಿದೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯವೈಖರಿಯನ್ನು ಟೀಕಿಸಿರುವ ಅವರು, ಡಿಕೆಶಿ ಹಾಗೂ ಅವರು ನೇಮಿಸಿದ ತಂಡದ (BLOGs) ಲೋಪದೋಷಗಳಿಂದಾಗಿ ಕಾಂಗ್ರೆಸ್ 8-10 ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ನೇರವಾಗಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಜವಾದ ಅಹಿಂದ ನಾಯಕ ಎಂದು ಬಣ್ಣಿಸಿರುವ ರಾಜಣ್ಣ, 2013 ಮತ್ತು 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಶ್ಲಾಘಿಸಿದ್ದಾರೆ. ಅಹಿಂದ ವರ್ಗಗಳಿಗೆ ನ್ಯಾಯ ಒದಗಿಸುವ ಏಕೈಕ ನಾಯಕ ಸಿದ್ದರಾಮಯ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಪಕ್ಷದ ಆಂತರಿಕ ವಿದ್ಯಮಾನ ಹಾಗೂ ತಮಗಾದ ಅನ್ಯಾಯದ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೋರಿದ್ದಾರೆ.

ಇದನ್ನೂ ಓದಿ : ಮೋಹನ್ ಲಾಲ್-ಸಮರ್ಜಿತ್ ಲಂಕೇಶ್ ನಟನೆಯ “ವೃಷಭ” ಡಿ.25ಕ್ಕೆ ತೆರೆಗೆ – ಶುಭ ಹಾರೈಸಿದ ಡಿಸಿಎಂ ಡಿ.ಕೆ ಶಿವಕುಮಾರ್!







