ಸದಾ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ಸೌತ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಖ್ಯಾತ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ನಿರ್ಮಾಣದ ಈ ಚಿತ್ರಕ್ಕೆ ‘ರೌಡಿ ಜನಾರ್ದನ’ ಎಂದು ನಾಮಕರಣ ಮಾಡಲಾಗಿದ್ದು, ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಚಿತ್ರದ ಶೀರ್ಷಿಕೆಯ ‘ಗ್ಲಿಂಪ್ಸ್’ ಬಿಡುಗಡೆ ಮಾಡಲಾಯಿತು.
‘ರಾಜಾ ವಾರು ರಾಣಿ ಗಾರು’ ಚಿತ್ರದ ಮೂಲಕ ಹೆಸರು ಮಾಡಿದ್ದ ಪ್ರತಿಭಾವಂತ ನಿರ್ದೇಶಕ ರವಿ ಕಿರಣ್ ಕೋಲಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಕ್ತಸಿಕ್ತ ಹಾಗೂ ರಾ ಆಕ್ಷನ್ ಕಥಾಹಂದರ ಹೊಂದಿರುವ ಈ ಗ್ಲಿಂಪ್ಸ್, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ವಿಜಯ್ ದೇವರಕೊಂಡ ಅವರು ಈ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಸ್ಲಾಂಗ್ ಮತ್ತು ಮ್ಯಾನರಿಸಂ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ.

ಗ್ಲಿಂಪ್ಸ್‌ನಲ್ಲಿ ವಿಜಯ್ ದೇವರಕೊಂಡ ಅವರು ರಕ್ತಸಿಕ್ತ ಮೈಕಟ್ಟು, ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸುತ್ತಿದ್ದು, ಅವರ ತೀಕ್ಷ್ಣ ಕಣ್ಣೋಟ ಮತ್ತು ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. 1980ರ ಕಾಲಘಟ್ಟದ ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದ್ದು, ವಿಜಯ್ ಅವರು ಈ ಚಿತ್ರಕ್ಕಾಗಿ ವಿಶೇಷವಾಗಿ ಗೋದಾವರಿ ಸ್ಲಾಂಗ್ ಬಳಸಿದ್ದಾರೆ.
ಚಿತ್ರಕ್ಕೆ ಆನೆಂಡ್ ಸಿ. ಚಂದ್ರನ್ ಅವರ ಛಾಯಾಗ್ರಹಣವಿದ್ದು, ಕ್ರಿಸ್ಟೋ ಕ್ಸೇವಿಯರ್ ಅವರ ಸಂಗೀತ ಮತ್ತು ಸುಪ್ರೀಂ ಸುಂದರ್ ಅವರ ಆಕ್ಷನ್ ಕೊರಿಯೋಗ್ರಫಿ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿವೆ. ‘ರೌಡಿ ಜನಾರ್ದನ’ ಸಿನಿಮಾ 2026ರ ಡಿಸೆಂಬರ್‌ನಲ್ಲಿ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ : ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ – ಶಾಂತಲಿಂಗ ಶಿವಾಚಾರ್ಯರು ಪೊಲೀಸ್ ವಶಕ್ಕೆ!







