ದೇಶಾದ್ಯಂತ UPI ಸರ್ವರ್​ ಡೌನ್ – ಫೋನ್‌ಪೇ, ಗೂಗಲ್ ಪೇ ಬಳಕೆದಾರರ ಪರದಾಟ.. ದಿಢೀರ್ ಆಗಿದ್ದೇನು?

ದೇಶಾದ್ಯಂತ ಇಂದು UPI, ಪೇಟಿಎಂ, ಫೋನ್​ಪೇ, ಗೂಗಲ್ ಪೇ ಸೇವೆಯಲ್ಲಿ ತೊಂದರೆಯಾಗಿದೆ. ಆನ್​ಲೈನ್ ಪೇಮೆಂಟ್ ನಂಬಿಕೊಂಡಿದ್ದವರು ಪರದಾಟ ನಡೆಸುವಂತಾಗಿದ್ದು, ಜೇಬಲ್ಲಿ ಹಣ ಇಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇಂದು ಬೆಳಗ್ಗೆಯಿಂದಲೇ ಆನ್‌ಲೈನ್‌ ಪೇಮೆಂಟ್‌ ಮಾಡುವ UPI ಸರ್ವೀಸ್​ನಲ್ಲಿ ಅಡಚಣೆ ಆಗಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಈ ತೊಂದರೆ ಕಾಣಿಸಿಕೊಂಡಿದ್ದು, ಜೇಬಲ್ಲಿ ದುಡ್ಡಿಲ್ಲದ ಗ್ರಾಹಕರು ಹಣಕ್ಕಾಗಿ ಪರದಾಡುವಂತಾಗಿದೆ. ದೇಶಾದ್ಯಂತ ಆರ್ಥಿಕ ವ್ಯವಹಾರದ ಮೇಲೆ ಇದು ಪರಿಣಾಮ ಬೀರಿದೆ.

ಸಕಾಲಕ್ಕೆ ಪೇಟಿಎಂ, ಫೋನ್​ಪೇ, ಗೂಗಲ್ ಪೇ ಕೆಲಸ ಮಾಡದ ಹಿನ್ನೆಲೆಯಲ್ಲಿ ಹಲವಾರು ಜನ ತಮಗಾದ ತೊಂದರೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. X ನಲ್ಲಿ UPI ಸರ್ವರ್ ಡೌನ್ ಅನ್ನೋ ಟ್ಯಾಗ್‌ನಲ್ಲಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ. ಕೆಲವೇ ಗಂಟೆಯಲ್ಲಿ 1,168ಕ್ಕೂ ಹೆಚ್ಚು ದೂರು ಸಲ್ಲಿಕೆಯಾಗಿದೆ.

ದಿಢೀರ್ ಆಗಿದ್ದೇನು? UPI ಸರ್ವರ್ ಡೌನ್ ಆದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ಬಗ್ಗೆ ಸ್ಪಷ್ಟನೆ ನೀಡಿದೆ. UPI ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗಶಃ UPI ವಹಿವಾಟು ಕುಸಿತವಾಗಿದೆ. ನಾವು ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಈ ಅಡಚಣೆಗಾಗಿ ಗ್ರಾಹಕರಲ್ಲಿ ವಿಷಾಧಿಸುತ್ತೇವೆ ಎಂದು NPCI ತಿಳಿಸಿದೆ.

ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ರಣ ಕಹಳೆ – ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಅಭಿಯಾನಕ್ಕೆ ಹೆಚ್‌ಡಿಕೆ ಚಾಲನೆ!

Btv Kannada
Author: Btv Kannada

Read More