ಕೊಟ್ಟೂರಿನಲ್ಲಿ ಮಟ್ಕಾ ದಂಧೆ ಗೊತ್ತಿದ್ರೂ ಪೊಲೀಸರು ಸೈಲೆಂಟ್ – ‘ಅಮೂಲ್ಯ ಟೀ ಸ್ಟಾಲ್’ ಈಗ ಜೂಜುಕೋರರ ಅಡ್ಡೆ!

ಕೊಟ್ಟೂರು : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮಟ್ಕಾ ದಂಧೆ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ಬಡವರ ಹಣ ಲೂಟಿ ಮಾಡುತ್ತಿರುವ ಈ ಅಕ್ರಮಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಪಟ್ಟಣದ ಉಜ್ಜಿನಿ ಸರ್ಕಲ್‌ನ ಅಮೂಲ್ಯ ಟೀ ಸ್ಟಾಲ್ ಈಗ ಹೆಸರಿಗೆ ಮಾತ್ರ ಟೀ ಅಂಗಡಿಯಾಗಿದ್ದು ಮಟ್ಕಾ ದಂಧೆ ಅಡ್ಡೆಯಾಗಿ ಮಾರ್ಪಟ್ಟಿದೆ. ಮೂಗ ಅಲಿಯಾಸ್ ಮಟ್ಕಾ ಮೂಗ ಟೀ ಮಾರುವ ನೆಪದಲ್ಲಿ ಬಹಿರಂಗವಾಗಿ ಮಟ್ಕಾ ದಂಧೆ ನಡೆಸುತ್ತಿದ್ದಾನೆ. ಕೂಲಿ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡಿರುವ ಈತ, ಹತ್ತಕ್ಕೆ ಸಾವಿರ.. ಸಾವಿರಕ್ಕೆ ಲಕ್ಷ ಎಂಬ ಆಮಿಷವೊಡ್ಡಿ ಬಡವರ ಹಣವನ್ನು ಲೂಟಿ ಮಾಡಲಾಗುತ್ತಿದೆ. ಇದರಿಂದ ದಿನಗೂಲಿ ನಂಬಿದ ನೂರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.

ಸ್ಥಳೀಯ PSI ಗೀತಾಂಜಲಿ ಹಾಗೂ ಸಿಬ್ಬಂದಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಮೂಗಿನ ನೇರಕ್ಕೇ ದಂಧೆ ನಡೆಯುತ್ತಿದ್ದರೂ ದಾಳಿ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಿನ್ನೆಯಷ್ಟೇ ಅಧಿವೇಶನದಲ್ಲಿ ಪೊಲೀಸರ ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗುತ್ತಿದ್ದರೂ, ಕೊಟ್ಟೂರು ಪೊಲೀಸರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಕೊಟ್ಟೂರಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಟ್ಕಾ ದಂಧೆಯನ್ನು ಕೂಡಲೇ ನಿಲ್ಲಿಸಬೇಕು. ಬಡವರ ಬದುಕಿನೊಂದಿಗೆ ಆಟವಾಡುತ್ತಿರುವ ಮಟ್ಕಾ ಮೂಗ ಮತ್ತು ಆತನ ತಂಡವನ್ನು ಬಂಧಿಸಬೇಕು. ವಿಜಯನಗರ SP ಜಾನ್ಹವಿ ಮೇಡಂ ನೀವಾದ್ರೂ ಈ ಮಟ್ಕಾ ದಂಧೆ ನಿಲ್ಲಿಸಿ, ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೈರತಿ ಬಸವರಾಜ್‌ಗೆ ಅರೆಸ್ಟ್ ಭೀತಿ – ಬಿಕ್ಲುಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್!

Btv Kannada
Author: Btv Kannada

Read More