ಬೈರತಿ ಬಸವರಾಜ್‌ಗೆ ಅರೆಸ್ಟ್ ಭೀತಿ – ಬಿಕ್ಲುಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್!

ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜುಗೆ ಇದೀಗ ಬಂಧನ ಭೀತಿ ಎದುರಾಗಿದೆ. ಈ ಕೇಸ್​ಗೆ ಸಂಬಂಧಿಸಿ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ನೀಡಿದೆ. ಆದರೆ, ಪ್ರಕರಣಕ್ಕೆ ಕೋಕಾ ಕಾಯ್ದೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಭೈರತಿ ಬಸವರಾಜು ಅವರು ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲಿಯವರೆಗೂ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಭೈರತಿ ಬಸವರಾಜು ಬಂಧನ ಭೀತಿಯನ್ನು ಎದುರಿಸುವಂತಾಗಿದೆ.

ಇನ್ನೊಂದೆಡೆ, ಕೋಕಾ ಕಾಯ್ದೆ ರದ್ದಾಗಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಇತರ ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಇನ್ನೂ ಆರೋಪಪಟ್ಟಿ ಸಲ್ಲಿಕೆಯಾಗದಿರುವ ಕಾರಣ ಮುಂದಿನ ದಿನಗಳಲ್ಲಿ ಜಾಮೀನಿಗೆ ಅವಕಾಶವಿದೆ ಎನ್ನಲಾಗಿದೆ.

ಏನಿದು ಪ್ರಕರಣ?

ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಅವರ ಹೆಸರು ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಬೈರತಿ ಬಸವರಾಜ್ ಅವರ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದವು. ಬಂಧನದ ಭೀತಿಯಿಂದ ಶಾಸಕರು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಈಗಲೂ ನಾನೇ ಮುಖ್ಯಮಂತ್ರಿ.. ಮುಂದೆಯೂ ನಾನೇ – ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!

Btv Kannada
Author: Btv Kannada

Read More