ಬೆಂಗಳೂರು : ಕುಮಾರಸ್ವಾಮಿ ಲೇಔಟ್ ಠಾಣೆಯ ಮೋಸ್ಟ್ ವಾಂಟೆಡ್ ರೌಡಿಶೀಟರ್ ಮಲಯಾಳಿ ಮಧು ಯಾರು ಮಾತಾಡಿದರೂ ಲಾಂಗ್‌ನಲ್ಲೇ ಉತ್ತರ ಕೊಡುತ್ತಿದ್ದ. ಕೊಲೆ, ಸುಲಿಗೆ ಸೇರಿದಂತೆ ಹತ್ತಾರು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಲಯಾಳಿ ಮಧು ಭಿಕ್ಷೆ ಬೇಡುತ್ತಿದ್ದಾನೆ. ಅದೇ ಗತ್ತು-ಗೈರತ್ತುಗಳಿದ್ದ ಮನುಷ್ಯ ಬೆತ್ತಲೆಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದಾನೆ.
ಜೆಪಿ ನಗರದ ಪ್ರಖ್ಯಾತ ಡಬಲ್ ಮರ್ಡರ್ ಕೇಸ್‌ನ ಪ್ರಮುಖ ಆರೋಪಿಯಾಗಿದ್ದ ಮಧು, ರಕ್ತದ ಹೋಕುಳಿಯಲ್ಲೇ ಆಟವಾಡುತ್ತಿದ್ದ ಈತನ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೋಷಕರು ಈತನಿಗೆ ಮದುವೆ ಮಾಡಿಸಿದ್ದರು. ಮದುವೆಯಾದರೆ ಸುಧಾರಿಸಬಹುದು ಎಂಬ ಆಸೆ ಮನೆಯವರದ್ದಾಗಿತ್ತು. ಬುದ್ಧಿ ಕಲಿಯದ ಮಧು ಹೆಂಡತಿಗೂ ದೈಹಿಕ-ಮಾನಸಿಕ ಕಿರುಕುಳ ನೀಡತೊಡಗಿದ್ದರಿಂದ, ಆಕೆ ಈತನ ಸಹವಾಸವೇ ಬೇಡವೆಂದು ತವರು ಮನೆ ಸೇರಿಕೊಂಡಳು.
ಮೊದಲ ಪತ್ನಿ ಹೋದ ಬೆನ್ನಲ್ಲೇ ಇನ್ನೊಬ್ಬಳನ್ನು ಕಟ್ಕೊಂಡಿದ್ದ ಮಧು, ಅವಳ ಟಾರ್ಚರ್ರೋ, ಇವ್ನ ವೀಕ್ನೆಸ್ಸೋ ಆ ಸಂಬಂಧ ಕೂಡ ಹೋಯ್ತು. ಇತ್ತ ಪೊಲೀಸ್ ಕೇಸುಗಳ ಕಾಟ, ಅತ್ತ ಸಂಸಾರಿಕ ಕಲಹದಿಂದಾಗಿ ಪ್ರತಿದಿನ ರಕ್ತ ನೋಡುತ್ತಿದ್ದ ರೌಡಿ ಮಧು ಮಾನಸಿಕವಾಗಿ ಕುಸಿಯತೊಡಗಿದ. ಅಪರಾಧ ಲೋಕದ ಒತ್ತಡಕ್ಕೆ ಸಿಲುಕಿ ಪೂರ್ತಿ ಹುಚ್ಚನಾಗಿದ್ದಾನೆ. ಈತ ಈಗ ಬಟ್ಟೆಬರೆಗಳ ಪ್ರಜ್ಞೆಯೂ ಇಲ್ಲದೆ ಅರೆಬೆತ್ತಲಾಗಿ ಬೆಂಗಳೂರಿನ ಬೀದಿಗಳಲ್ಲಿ ಅಲೆದಾಡುತ್ತಿದ್ದಾನೆ. ಅಂದು ಲಾಂಗ್ ಹಿಡಿದು ಅಬ್ಬರಿಸುತ್ತಿದ್ದವನ ಮುಖದಲ್ಲಿ ಇಂದು ಬರಿ ಶೂನ್ಯಭಾವ ಆವರಿಸಿದೆ. ಹತ್ತಾರು ಕುಟುಂಬಗಳ ಕಣ್ಣೀರಿಗೆ ಕಾರಣವಾಗಿದ್ದ ಈತ, ಇಂದು ತಾನು ಮಾಡಿದ ಕರ್ಮಕ್ಕೆ ತಾನೇ ಬೆಲೆ ತೆರುತ್ತಿದ್ದಾನೆ.
ಇದನ್ನೂ ಓದಿ : ಬೆಂಗಳೂರಿನ ಕಸದ ಸಮಸ್ಯೆಗೆ ನಟಿ ಐಂದ್ರಿತಾ ರೈ ಅಸಮಾಧಾನ – GBAಗೆ ಕರೆ ಮಾಡಿದ್ರೂ ನೋ ಯೂಸ್!







