ಬೆಂಗಳೂರು : ಗಂಡನ ಕಿರುಕುಳ ತಾಳಲಾರದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಗೆ ಶಿವಾಜಿನಗರ PSI ರುದ್ರಗೌಡ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ರಕ್ಷಣೆ ನೀಡಬೇಕಾದ ಅಧಿಕಾರಿಯೇ ಸಂತ್ರಸ್ತೆಗೆ ಆವಾಜ್ ಹಾಕುವ ಮೂಲಕ ಉದ್ಧಟತನ ಮೆರೆದಿದ್ದಾನೆ.

2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಾರ್ಷಲ್ ಜೋನ್ಸ್ ಹಾಗೂ ಮಹಿಳೆ ಸಂಸಾರದಲ್ಲಿ ಮದುವೆಯಾದ ಮೊದಲ ದಿನವೇ ಬಿರುಕು ಮೂಡಿತ್ತು. ವರದಕ್ಷಿಣೆ ತೆಗೆದುಕೊಂಡು ಬಾ, ಇಲ್ಲದಿದ್ದರೆ ಮನೆ ಬಿಟ್ಟು ತೊಲಗು ಎಂದು ಮಾರ್ಷಲ್ ಜೋನ್ಸ್ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ. ಪತಿಯ ಈ ವರ್ತನೆಯಿಂದ ಬೆಂಡಾಗಿದ್ದ ಪತ್ನಿ ನ್ಯಾಯ ಕೇಳಿ ಶಿವಾಜಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಠಾಣೆಗೆ ಹೋದ ಮಹಿಳೆಗೆ ಅಲ್ಲಿ ಮತ್ತೊಂದು ಆಘಾತ ಕಾದಿತ್ತು. ದೂರನ್ನು ಆಲಿಸಿ ಕ್ರಮ ಕೈಗೊಳ್ಳಬೇಕಾದ ಶಿವಾಜಿನಗರ PSI ರುದ್ರಗೌಡ, ಖಾಕಿ ಹಾಕ್ಕೊಂಡಿರೋ ಮದದಲ್ಲಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಪತಿಗೆ ಬುದ್ಧಿ ಕಲಿಸಬೇಕಾದ ಪೊಲೀಸರೇ ಫಿಕ್ಸಿಂಗ್ ಆಗ್ತವ್ರೆ ಎಂದು ನೊಂದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಈಗ ಮಾನವ ಹಕ್ಕು ಆಯೋಗಕ್ಕೆ (Human Rights Commission) ದೂರನ್ನು ನೀಡಿದ್ದಾರೆ. ನನ್ನ ಗಂಡನಿಗೆ ಕಾನೂನಿನ ಪಾಠ ಕಲಿಸಬೇಕಾದ ಪೊಲೀಸರೇ ಆತನ ಪರ ನಿಂತು ನನಗೆ ಧಮ್ಕಿ ಹಾಕುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡ PSIಗೆ ಬುದ್ಧಿ ಕಲಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಉಡುಪಿ : ಕಾಪುನಗರ ಯೋಜನಾ ಪ್ರಾಧಿಕಾರಕ್ಕೆ ಲೋಕಾಯುಕ್ತ ದಾಳಿ!







