ವಿಜಯನಗರ : ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಮಟ್ಕಾ ದಂಧೆ ಮಿತಿಮೀರಿದ್ದು, ಬಡ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬರುತ್ತಿದೆ. ಸಾರ್ವಜನಿಕವಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲೇ ಈ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.

ಕೊಟ್ಟೂರಿನ ಉಜ್ಜಿನಿ ಸರ್ಕಲ್‌ನಲ್ಲಿರುವ ಅಮೂಲ್ಯ ಟೀ ಸ್ಟಾಲ್ ಈಗ ಮಟ್ಕಾ ದಂಧೆಯ ಅಡ್ಡೆಯಾಗಿ ಮಾರ್ಪಟ್ಟಿದೆ. ಹೇಳಿಕೊಳ್ಳಲು ಇದು ಟೀ ಅಂಗಡಿಯಾದರೂ, ಇಲ್ಲಿ ನಡೆಯುತ್ತಿರುವುದು ಮಾತ್ರ ಅಪ್ಪಟ OC ದಂಧೆ. ಮೂಗ ಅಲಿಯಾಸ್ ಮಟ್ಕಾ ಮೂಗ ಎಂಬಾತನೇ ಈ ದಂಧೆಯ ಕಿಂಗ್‌ಪಿನ್ ಆಗಿದ್ದು, ಟೀ ಮಾರುವ ನೆಪದಲ್ಲಿ ಮಟ್ಕಾ ಚೀಟಿಗಳನ್ನು ಹರಿಯುತ್ತಿದ್ದಾನೆ.

ಹತ್ತಕ್ಕೆ ಸಾವಿರ, ಸಾವಿರಕ್ಕೆ ಲಕ್ಷ ಎಂಬ ಆಸೆ ತೋರಿಸಿ ದಿನವಿಡೀ ಕಷ್ಟಪಟ್ಟು ದುಡಿಯುವ ಕೂಲಿ ಕಾರ್ಮಿಕರನ್ನು ಈ ಜಾಲ ಸೆಳೆಯುತ್ತಿದೆ. ಬಡವರು ತಮ್ಮ ರಕ್ತ ಸುರಿಸಿ ಸಂಪಾದಿಸಿದ ಹಣವನ್ನು ಈ ಜೂಜಿನ ಅಡ್ಡೆಗೆ ಸುರಿಯುತ್ತಿದ್ದಾರೆ. ಅಮೂಲ್ಯ ಟೀ ಸ್ಟಾಲ್‌ನಲ್ಲೇ ಈ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ದಾಳಿ ನಡೆಯುತ್ತಿಲ್ಲ. ನಿನ್ನೆಯಷ್ಟೇ ವಿಧಾನಮಂಡಲ ಅಧಿವೇಶನದಲ್ಲಿ ಪೊಲೀಸರ ಲಂಚ ಕರ್ಮಕಾಂಡದ ಬಗ್ಗೆ ಚರ್ಚೆ ನಡೆದಿತ್ತು. ಮಟ್ಕಾ ಆಡಿಸುವುದು ಕಾನೂನು ಬಾಹಿರ ಎಂದು ಗೊತ್ತಿದ್ದರೂ, ಪೊಲೀಸರು ಏಕೆ ಸೈಲೆಂಟ್ ಆಗಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ವಿಜಯನಗರ SP ಜಾನ್ಹವಿ ಮೇಡಂ ನೀವಾದ್ರೂ ಈ ಮಟ್ಕಾ ದಂಧೆ ನಿಲ್ಲಿಸಿ.
ಇದನ್ನೂ ಓದಿ : ಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರ ಅಟ್ಟಹಾಸ – ಬೆಂಗಳೂರಿಗರಿಂದಲೇ ದಿನಕ್ಕೆ 4.83 ಕೋಟಿ ಲೂಟಿ!







