ಪತ್ನಿಯ ಹತ್ಯೆಗೆ ಪತಿಯಿಂದಲೇ ಸುಫಾರಿ – ಇಬ್ಬರು ಆರೋಪಿಗಳು ಸೇರಿ ಪತಿ ಮಹೇಶ್ ಅರೆಸ್ಟ್!

ಮೈಸೂರು : ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ಪತ್ನಿಯ ಕೊಲೆಗೆ ಸುಫಾರಿ ನೀಡಿದ್ದ ಪತಿ ಹಾಗೂ ಇಬ್ಬರು ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. ಪಾನಿಪುರಿ ವ್ಯಾಪಾರಿಯಾಗಿದ್ದ ಮಹೇಶ್, ಹಣಕಾಸಿನ ವಿಚಾರ ಹಾಗೂ ಕೌಟುಂಬಿಕ ಕಲಹದಿಂದಾಗಿ ಪತ್ನಿ ನಾಗರತ್ನ ಹತ್ಯೆಗೆ ಸಂಚು ರೂಪಿಸಿದ್ದನು. ಸುಫಾರಿ ಪಡೆದಿದ್ದ ಹಂತಕರು ನಾಗರತ್ನ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾರೆ.

ಪಾನಿಪುರಿ ಮಾರಿ ತಾನು ಸಂಪಾದಿಸುತ್ತಿದ್ದ ಹಣವನ್ನೆಲ್ಲಾ ಪತ್ನಿ ಕಿತ್ತುಕೊಂಡು ಬೇರೆಯವರಿಗೆ ಬಡ್ಡಿಗೆ ಬಿಡುತ್ತಿದ್ದಳು, ತನಗೆ ಹಣ ನೀಡದೆ ಅವಮಾನಿಸುತ್ತಿದ್ದಳು ಎಂದು ಆರೋಪಿಸಿದ್ದಾನೆ. ಪತ್ನಿಯ ವರ್ತನೆಯಿಂದ ಬೇಸತ್ತ ಮಹೇಶ್, ಆಕೆಯನ್ನು ಕೊಲ್ಲಲು ವಿರಾಜಪೇಟೆಯ ಭಾಸ್ಕರ್ ಮತ್ತು ಅಭಿಷೇಕ್ ಎಂಬುವವರಿಗೆ ಸುಫಾರಿ ನೀಡಿದ್ದನು. ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವಂತೆ ಪ್ಲ್ಯಾನ್ ಮಾಡಿಕೊಟ್ಟಿದ್ದನು. ಈ ಸಂಚಿನಂತೆ ಆರೋಪಿಗಳು ನಾಗರತ್ನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ನಾಗರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲ್ಲುವಂತೆ ಸುಫಾರಿ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪತಿ ಮಹೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಕ್ಯಾಂಟರ್‌ಗೆ ಗುದ್ದಿದ ಗ್ರಾಂಡ್ ವಿಟಾರಾ – ಕಾರು ಚಾಲಕನ ಪತ್ನಿ ಸ್ಥಿತಿ ಗಂಭೀರ!

Btv Kannada
Author: Btv Kannada

Read More