ಬೆಂಗಳೂರು : ಪ್ರೀತಿ, ಪ್ರೇಮದ ನಾಟಕವಾಡಿ ಕಾಮದ ಬಲೆ ಬೀಸುತ್ತಿದ್ದ ‘ಹನಿಟ್ರ್ಯಾಪ್ ಕಿಲಾರಿ’ ವನಜಾ ಅಲಿಯಾಸ್ ಸಂಜನಾಳ ಅಸಲಿ ಮುಖವಾಡ ಬಯಲಾಗಿದೆ. ರಾಮಮೂರ್ತಿನಗರ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ಪ್ರೀತಿಸುವಂತೆ ಪೀಡಿಸಿ ಅರೆಸ್ಟ್ ಆಗಿರುವ ಈಕೆಯ ಹಿನ್ನೆಲೆ ಕೆದಕಿದ ಪೊಲೀಸರಿಗೆ ಆಘಾತಕಾರಿ ಸತ್ಯಗಳು ತಿಳಿದುಬಂದಿವೆ. ಕೋಟಿ ಕೋಟಿ ಹಣ ಇರುವ ಉದ್ಯಮಿಗಳು ಹಾಗೂ ಪ್ರಭಾವಿ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ಗಾಳ ಹಾಕುತ್ತಿದ್ದ ಈಕೆಯ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಕೋಟಿ ಕೋಟಿ ಹಣ ಇರುವ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವುದು. ಪರಿಚಯ ಬೆಳೆದ ನಂತರ ಪ್ರೀತಿಯಿಂದ ಮನೆಗೆ ಊಟಕ್ಕೆ ಕರೆಯುವುದು. ಬಂದವರ ಜೊತೆ ಆತ್ಮೀಯವಾಗಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುವುದು. ಲೈಂಗಿಕ ಸಂಪರ್ಕ ಬೆಳೆಸಿ ಅದನ್ನು ರಹಸ್ಯವಾಗಿ ಚಿತ್ರಿಸಿಕೊಳ್ಳುವುದು. ಕೊನೆಯಲ್ಲಿ ವಿಡಿಯೋ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಹಣ ಹಾಗೂ ಆಸ್ತಿಗಾಗಿ ಬೆದರಿಕೆ ಹಾಕುವುದೇ ಈಕೆಯ ಕಾಯಕವಾಗಿತ್ತು.

ಸತೀಶ್ ರೆಡ್ಡಿ ಎಂಬ ಕಾಂಟ್ರಾಕ್ಟರ್ ಈಕೆಯ ಬಲೆಗೆ ಬಿದ್ದಿದ್ದ, ಮನೆಗೆ ಊಟಕ್ಕೆ ಕರೆಸಿ ಹನಿಟ್ರ್ಯಾಪ್ ಮಾಡಿದ್ದ ಸಂಜನಾ, ವಿಡಿಯೋ ತೋರಿಸಿ ಬೆದರಿಸಿ ಮೊದಲ ಹಂತದಲ್ಲಿ 3 ಲಕ್ಷ ರೂ. ಪೀಕಿದ್ದಳು. ಅಷ್ಟಕ್ಕೇ ನಿಲ್ಲದೆ ಚಿನ್ನದ ಸರ, ಬ್ರೇಸ್ಲೆಟ್ ಮತ್ತು ಉಂಗುರವನ್ನು ಕಿತ್ತುಕೊಂಡಿದ್ದಳು. ಕೊನೆಗೆ ಸತೀಶ್ ಅವರ ಎರಡು ಅಂತಸ್ತಿನ ಕಟ್ಟಡವನ್ನೇ ತನ್ನ ಹೆಸರಿಗೆ ಬರೆಸಿಕೊಳ್ಳಲು ಯತ್ನಿಸಿದ್ದಳು. ಈ ಸಂಬಂಧ ಕೆ.ಆರ್.ಪುರಂ ಮತ್ತು ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೊಲೀಸ್ ಅಧಿಕಾರಿಗಳಿಗೂ ಈಕೆ ಬ್ಲಾಕ್‌ಮೇಲ್ ಮಾಡಿದ್ದಳು. 2018ರಲ್ಲಿ ದಾವಣಗೆರೆ ಮೂಲದ ಹೆಡ್ ಕಾನ್ಸ್‌ಟೇಬಲ್ ಜಗದೀಶ್ ಎಂಬುವವರು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ವೈಟ್‌ಫೀಲ್ಡ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಳು. ಆದರೆ ತನಿಖೆ ವೇಳೆ ಅದು ಸುಳ್ಳು ಎಂದು ಸಾಬೀತಾಗಿ ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ತಾನು ಒಬ್ಬ ಪೊಲೀಸ್ ಅಧಿಕಾರಿಯ ಪತ್ನಿ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಆರೋಪವೂ ಈಕೆಯ ಮೇಲಿದೆ.
ರಾಮಮೂರ್ತಿನಗರ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ನಿರಂತರವಾಗಿ ಫೋನ್ ಮಾಡಿ ನನ್ನನ್ನು ಪ್ರೀತಿಸು, ಇಲ್ಲದಿದ್ದರೆ ಸುಳ್ಳು ಕೇಸ್ ಹಾಕುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ್ದಾಳೆ. ಇದರಿಂದ ಬೇಸತ್ತ ಇನ್ಸ್‌ಪೆಕ್ಟರ್ ಸತೀಶ್ ನೀಡಿದ ದೂರಿನ ಮೇರೆಗೆ ಅರೆಸ್ಟ್.
ಇದನ್ನೂ ಓದಿ : ಭೂ ಕಬಳಿಕೆ ಆರೋಪ – ಸಚಿವ ಕೃಷ್ಣ ಬೈರೇಗೌಡ ರಾಜೀನಾಮೆಗೆ ಹೆಚ್ಚಿದ ಒತ್ತಡ.. ಪ್ರಕರಣ ಬಗ್ಗೆ ವರದಿ ಕೇಳಿದ ಹೈಕಮಾಂಡ್!







